ಮುದ್ದೇಬಿಹಾಳ : ಇಂದಿರಾ ನಗರ ನಿವಾಸಿಗಳಿಗೆ ಕಂಪ್ಯೂಟರ್ ಉತಾರೆ ಪೂರೈಸಬೇಕು ಎಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಬುಧವಾರ ಸಂಜೆ ಪುರಸಭೆ ಮುಖ್ಯಾಧಿಕಾರಿ ನೀಡಿದ ಲಿಖಿತ ಭರವಸೆಗೆ ಅಂತ್ಯಗೊಳಿಸಿದರು.
ಐದು ದಿನಗಳಿಂದ ಎರಡ್ಮೂರು ಹಂತದ ಹೋರಾಟ ನಡೆಸುತ್ತಿದ್ದ ನಿವಾಸಿಗಳು ಕಂಪ್ಯೂಟರ್ ಉತಾರೆ ಕೊಡಬೇಕು ಎಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದರು.ಬುಧವಾರ ಸ್ಲಂ ಬೋರ್ಡ್ ಅಧಿಕಾರಿ ಪ್ರಹ್ಲಾದ ಪಾಟೀಲ, ತಹಶೀಲ್ದಾರ್ ಕೀರ್ತಿ ಚಾಲಕ್, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮತ್ತಿತರರು ಸಂಧಾನಕ್ಕೆ ಆಗಮಿಸಿದ್ದರು. ಆಗ ಮಾತನಾಡಿದ ನಿವಾಸಿಗಳು, ಪುರಸಭೆ ಮುಖ್ಯಾಧಿಕಾರಿಗಳಿಗೆ,ಸ್ಲಂ ಬೋರ್ಡ್ ಅಧಿಕಾರಿಗಳಿಗೆ ನಿಮ್ಮ ಸಮಸ್ಯೆಗಳನ್ನು ಶೀಘ್ರ ಸರಿಪಡಿಸಿಕೊಂಡು ನಮಗೆ ತ್ವರಿತವಾಗಿ ಉತಾರೆ ನೀಡುವ ಕಾರ್ಯ ಮಾಡಬೇಕು ಎಂದು ಪ್ರಸ್ತಾಪಿಸಿದರು.
ಆಗ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಇಂದಿರಾನಗರದ ನಿವಾಸಿಗಳಿಗೆ ಉತಾರೆ ನೀಡುವ ಕುರಿತು ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಂದ ಸರ್ವೆ ಮಾಡಿರುಯವ ಮಾಹಿತಿಯನ್ನು ತರಿಸಿಕೊಂಡು ಹಾಗೂ ಪುರಸಭೆ ಅಧಿಕಾರಿಗಳು ಜಂಟಿಯಾಗಿ ಅಂದಾಜು 3-4 ತಿಂಗಳ ಒಳಗಾಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಇಂದಿರಾ ನಗರದ ನಿವಾಸಿಗಳಿಗೆ ಉತಾರೆ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತವಾಗಿ ನೀಡಿದ ಭರವಸೆ ಮೇರೆಗೆ ಹೋರಾಟಗಾರರು ಧರಣಿ ಅಂತ್ಯಗೊಳಿಸಿದರು.
ಧರಣಿಯಲ್ಲಿ ಬಸವರಾಜ ಕೋಳೂರ, ರಿಯಾಜ ಉಣ್ಣಿಬಾವಿ, ವಿಷ್ಣು ಗಂಗಾಪೂರ, ಬಾಬು ಬಳಗಾನೂರ, ಮುಖಂಡರಾದ ಕಾಮರಾಜ ಬಿರಾದಾರ,ವಾಯ್.ಎಚ್.ವಿಜಯಕರ್,ಹುಸೇನ್ ಮುಲ್ಲಾ, ಬುಡ್ಡಾ ನಿಡಗುಂದಿ, ಮಹೆಬೂಬ ಮುಲ್ಲಾ, ನಾಗೇಶ ಜಾಧವ, ಮಂಜು ಚಲವಾದಿ, ಸುಜಾತಾ ಸಿಂಧೆ ಮತ್ತಿರರು ಇದ್ದರು.







