82 ಕೋಟಿ ರೂ.ವೆಚ್ಚದ ಕಾಮಗಾರಿ ಉದ್ಘಾಟನೆ,731 ಕೋಟಿ ಕೆಲಸಗಳಿಗೆ ಶಂಕುಸ್ಥಾಪನೆ
ವಿಜಯಪುರ : ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ನಾಮಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ 82 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, 731 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ, 56 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಕಿತ್ತೂರು ಚೆನ್ನಮ್ಮನವರು 1857 ರ ಸಿಪಾಯಿ ದಂಗೆಗೂ ಮುನ್ನ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದರು.ಚೆನ್ನಮ್ಮ ಬ್ರಿಟೀಷರ ವಿರುದ್ದ ಛಲದಿಂದ ಹೋರಾಟ ಮಾಡಿ ಥ್ಯಾಕರೆಯನ್ನು ಸೋಲಿಸಿದ್ದರು.
ನಂತರ ಎರಡನೇ ಯುದ್ದದಲ್ಲಿ ಚೆನ್ನಮ್ಮ ಸೋತರು. ಅದಕ್ಕೆ ಕಾರಣ ನಮ್ಮವರೇ,
ಇನ್ನೂರು ವರ್ಷಗಳ ಕಾಲ ಬ್ರಿಟಿಷರು ನಮ್ಮನ್ನಾಳಲು ನಮ್ಮವರನ್ನೇ ಅಧೀನರನ್ನಾಗಿ ಮಾಡಿಕೊಂಡು ಆಳಿದರು.ಚೆನ್ನಮ್ಮನ ವಿಚಾರದಲ್ಲಿಯೂ ನಮ್ಮವರೇ ಅವರ ಸೋಲಿಗೆ ಕಾರಣವೆಂದು ಸಿಎಂ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ವೆಲೋಡ್ರಮ್ ಲೋಕಾರ್ಪಣೆ ಮಾಡಿದ್ದೇವೆ.ಈ ಭಾಗದಲ್ಲಿ ಸೈಕ್ಲಿಸ್ಟ್ ಗಳು ಹೆಚ್ಚು. ಹಿಂದೆ 2013 -18 ರಲ್ಲಿ ಸಿಎಂ ಆಗಿದ್ದಾಗ ವೆಲೋಡ್ರಮ್‌ಗೆ ಶಿಲಾನ್ಯಾಸ ಮಾಡಿದ್ದೆ.ಇಂದು ವೆಲೋಡ್ರಮ್ ಉದ್ಘಾಟನೆ ನಾವೇ ಮಾಡಿದ್ದೇವೆ.ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹೋರಾಟ ಮಾಡಲಾಗಿದೆ.ಹಿಂದೆ ಬಿಜೆಪಿ ಸರ್ಕಾರ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿತ್ತು.ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಸರ್ಕಾರಿ ಮೆಡಿಕಲ್ ಗೆ ಬೇಡಿಕೆ ಇಟ್ಟಿದ್ದರು.ನಮ್ಮ ಸರ್ಕಾರವೇ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತದೆ ಎಂದು ಘೋಷಣೆ ಮಾಡಿದರು.
ಯಾರೂ ಇದಕ್ಕಾಗಿ ಹೋರಾಟ ಮಾಡುವುದು ಅವಶ್ಯಕತೆಯಿಲ್ಲ.ಜಿಲ್ಲೆಯಲ್ಲಿ ಪಿಪಿಪಿ ಮಾಡೆಲ್ ಮೆಡಿಕಲ್ ಕಾಲೇಜು ಬೇಡ ಎಂದು ಹೋರಾಟ ಮಾಡುತ್ತಿದ್ದರು.ಹಿಂದಿನ ಬಿಜೆಪಿ ಸರ್ಕಾರ ಪಿಪಿಪಿ ಮಾಡೆಲ್ ಮೆಡಿಕಲ್ ಕಾಲೇಜು ಘೋಷಣೆ ಮಾಡಿತ್ತು.ಆದರೆ ನಾವು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದರು.
ನಿಮ್ಮಿಂದಲೇ ಕಳೆದ ಚುನಾವನೆಯಲ್ಲಿ 136 ಸ್ಥಾನ ಗೆದ್ದಿದ್ದು ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ.ಅದರಿಂದಲೇ ನಾವು ಸರ್ಕಾರ ಮಾಡಲು ಸಾದ್ಯವಾಗಿದೆ.136 ಸ್ಥಾನ ಗೆಲ್ಲಲು ನಿಮ್ಮ ಆಶಿರ್ವಾದ ಕಾರಣವೆಂದ ಸಿಎಂ, 45 ವರ್ಷಗಳಿಂದ ರಾಜ್ಯ ಸುತ್ತಾಡುತ್ತಿದ್ದೇನೆ.ಹಲವಾರು ಬಾರಿ ವಿಜಯಪುರಕ್ಕೆ ಬಂದಿದ್ದೇನೆ ಬಂದಾಗ ನೀವು ಆಶೀರ್ವಾದ ಮಾಡಿದ್ದೀರಿ.ಇಂದು ಯತ್ನಾಳ ಹಲವಾರು ಬೇಡಿಕೆಗಳನ್ನು ನೀಡಿದ್ದಾರೆ.ನಗರದಲ್ಲಿ ಮೇಲ್ಸೇತುವೆಗೆ 162 ಕೋಟಿ ಹಣ ಕೇಳಿದ್ದಾರೆ.ಅದನ್ನು ಮಾಡಿಕೊಡುತ್ತೇನೆಂದು ಎಂದು ಸಿಎಂ ಘೋಷಣೆ ಮಾಡಿದರು.
ಕನಕದಾಸ ವೃತ್ತದಿಂದ ಶಿವಾಜಿ ಚೌಕ್‌ವರೆಗೂ ಮೇಲ್ಸೇತುವೆ ಮಾಡುತ್ತೇವೆ.7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದ ಅರಸು, ಅವರಿಗಿಂತ ಹೆಚ್ಚು ಕಾಲ ಸಿಎಂ ಆಗಿದ್ದೇನೆ.ಇದಕ್ಕೆ ನಿಮ್ಮೆಲ್ಲರ ಆಶಿರ್ವಾದ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಖರ್ಗೆ ಅವರ ಆಶಿರ್ವಾದ ಕಾರಣ.ಹೆಚ್ಚು ಕಾಲ ಸಿಎಂ ಆಗಲು ಜನರು ಕಾರಣ ಅದಕ್ಕಾಗಿ ಎಲ್ಲ ಜನರಿಗೆ ಅಭಿನಂದಿಸುತ್ತೇನೆ.ಜಿಲ್ಲೆಯ ಸಚಿವ ಎಂ ಬಿ ಪಾಟೀಲ ಹಾಗು ಇತರರು ನನಗೆ ಸನ್ಮಾನ ಮಾಡಿರೋ ಕಾರಣ ಅವರನ್ನೂ ಅಭಿನಂದಿಸುವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ತಪ್ಪಾಗಿದೆ. ಇದಕ್ಕಾಗಿ ತಮ್ಮೆಲ್ಲರ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.ಡಿಸಿಎಂ ಡಿ.ಕೆ.ಶಿವಕುಮಾರ,ಸಚಿವರಾದ ಎಂ.ಬಿ.ಪಾಟೀಲ,ಶಿವಾನAದ ಪಾಟೀಲ,ಡಾ.ಎಚ್.ಸಿ.ಮಹದೇವಪ್ಪ,ರಾಮಲಿಂಗಾರೆಡ್ಡಿ ಸೇರಿದಂತೆ ಜಿಲ್ಲೆಯ ಶಾಸಕರು,ಜನಪ್ರತಿನಿಧಿಗಳು,ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.







