ಮುದ್ದೇಬಿಹಾಳ : ಪಟ್ಟಣದಲ್ಲಿ ಭಾನುವಾರ ನಡೆದ ಹಿಂದೂ ಮಹಾ ಸಮ್ಮೇಳನದ ಭವ್ಯ ಶೋಭಾಯಾತ್ರೆ ರಾಜ್ಯಕ್ಕೆ ಮಾದರಿ ಸಂದೇಶವನ್ನು ರವಾನಿಸಿತು.
ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ ಜಾತಿ,ಉಪ ಪಂಗಡಗಳ ಜನರು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡು ತಾವೆಲ್ಲ ಹಿಂದೂ ಧರ್ಮೀಯರು ಒಂದೇ ಎಂದು ಒಗ್ಗಟ್ಟು ಪ್ರದರ್ಶನ ಮಾಡಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಶರಣ ಸೋಮನಾಳದ ಮಹದೇವಯ್ಯ ಶಾಸ್ತಿಗಳು, ಲಾಲ್‌ಲಿಂಗೇಶ್ವರ ಸ್ವಾಮೀಜಿ ಹಾಗೂ ಗಣ್ಯರು ಮದ್ಯಾಹ್ನ ೩.೪೫ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು.ಅಲ್ಲಿಂದ ಆರಂಭಗೊOಡ ಶೋಭಾಯಾತ್ರೆ ಇಂದಿರಾ ವೃತ್ತ, ಮುಖ್ಯರಸ್ತೆ,ದ್ಯಾಮವ್ವನ ಕಟ್ಟೆ,ಬಸವೇಶ್ವರ ವೃತ್ತ,ಬಸ್ ನಿಲ್ದಾಣ,ಕಿತ್ತೂರು ರಾಣಿ ಚೆನ್ನಮ್ಮ ವೃತ್ತ,ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ವಿಬಿಸಿ ಹೈಸ್ಕೂಲ್ ಮೈದಾನವನ್ನು ತಲುಪಿತು.
ಮೆರವಣಿಗೆಯಲ್ಲಿ ಬೊಂಬೆಗಳ ಕುಣಿತ, ಜೋಗತಿ ನೃತ್ಯ, ಭಜನೆ,ಡೊಳ್ಳಿನ ಮೇಳ,ಹೆಜ್ಜೆ ಮೇಳ,ಗೋಕಾಕದ ಜಾಂಚ್ ಮೆರವಣಿಗೆಯಲ್ಲಿ ಗಮನ ಸೆಳೆದರು. ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳ ವೃತ್ತಿಗೆ ಸಂಬAಧಿಸಿದ ರೂಪಕಗಳು ಮೆರವಣಿಗೆಯಲ್ಲಿ ಸಾಗಿದವು.ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಶೋಭೆ ತಂದರು.
ಪ್ರಮುಖರಾದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ,ಮಲಕೇಂದ್ರಗೌಡ ಪಾಟೀಲ,ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ,ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಯುವ ಮುಖಂಡ ಭರತಗೌಡ ಪಾಟೀಲ ನಡಹಳ್ಳಿ, ಉದ್ಯಮಿ ಎ.ಗಣೇಶ ನಾರಾಯಣಸ್ವಾಮಿ,ಕೆಯುಸಿ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ರವಿ ಎನ್.ನಾಯಕ,ಪರಶುರಾಮ ನಾಲತವಾಡ,ಬಹಾದ್ದೂರ ರಾಠೋಡ, ಮೊದಲಾದವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಪೊಲೀಸ್ ಭದ್ರತೆ :ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ನೇತೃತ್ವದಲ್ಲಿ ಸಿಪಿಐ ಮೊಹ್ಮದ ಫಸಿವುದ್ದೀನ, ಮುದ್ದೇಬಿಹಾಳ ಪಿಎಸೈ ಸಂಜಯ ತಿಪರೆಡ್ಡಿ, ತಾಳಿಕೋಟಿ ಪಿಎಸೈ ಜ್ಯೋತಿ ಖೋತ ಸೇರಿದಂತೆ ನೂರಾರು ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.







