ತಾಳಿಕೋಟಿ : ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಶಾಲೆಯಲ್ಲಿ ಎರಡು ದಿನಗಳ ಕಲಾ ವೈಭವ-2026ರ ಮೊದಲ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ 2026 ನೇ ಸಾಲಿನ ಕಲಾ ವೈಭವಕ್ಕೆಂದು ಸಿದ್ಧಪಡಿಸಿದ್ದ ಭವ್ಯ ವೇದಿಕೆ ಸಾರ್ವಜನಿಕರ,ಪಾಲಕರು,ವಿದ್ಯಾರ್ಥಿಗಳು ,ಅಧಿಕಾರಿಗಳ ಗಮನ ಸೆಳೆಯುವಂತಿತ್ತು.ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ,ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸರಕಾರಿ ಕಾರ್ಯಕ್ರಮಗಳ ಸಾಮರ್ಥ್ಯದಷ್ಟು ವಿಸ್ತಾರವಾದ ವೇದಿಕೆಯನ್ನು ಹಾಕಿದ್ದು ಕಲಾವೈಭವದ ಮೆರಗು ಹೆಚ್ಚಿಸಿತು. ನೃತ್ಯದಲ್ಲೂ ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಪದ್ಧತಿ, ಹಾಸ್ಯ, ಸಮಾಜ ಸೇವೆ, ಧಾರ್ಮಿಕ, ಶೈಕ್ಷಣಿಕ ವಿಷಯಗಳನ್ನು ನೃತ್ಯಗಳ ಮೂಲಕ ಪ್ರಸ್ತುತಪಡಿಸಿದ್ದು ಪಾಲಕರ ಮನಸ್ಸು ಗೆದ್ದಿತು.ಪ್ರತಿ ನೃತ್ಯದ ನಿರೂಪಣೆಯನ್ನು ವಿದ್ಯಾರ್ಥಿಗಳೇ ಮಾಡುತ್ತಿರುವುದು ಸಾಂಸ್ಕೃತಿಕ ಕಾರ್ಯಕ್ರಮಗಳ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು. ಹಿರಿಯರ ಬಗ್ಗೆ ಗೌರವ ಹೊಂದಲು ಮಕ್ಕಳಿಂದ ತಾಯಂದಿರ ಪಾದಪೂಜೆ ಮಾಡಿಸುವ ಕಾರ್ಯಕ್ರಮ ಹಿರಿಯರು ತಲೆದೂಗುವಂತೆ ಮಾಡಿತು.






