ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ ನೀಡುತ್ತಾರೆ.ಆಕಳು ಶ್ರೇಷ್ಠ,ಅದರ ಸೆಗಣಿ,ಮೂತ್ರ ಶ್ರೇಷ್ಠ ಎನ್ನುತ್ತಾರೆ.ಆದರೆ ಏನು ಮಾತನಾಡುತ್ತಾರೆಯೋ ಅದರಂತೆ ಅವರೇ ನಡೆದುಕೊಳ್ಳುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ಹೇಳಿದರು.
ಪಟ್ಟಣದ ಹುಡ್ಕೋದ ಹೇಮರಡ್ಡಿ ಮಲ್ಲಮ್ಮ ವೃತ್ತದ ಬಳಿ ಇರುವ ಗಾರ್ಡನ್‌ದಲ್ಲಿ ಬುಧವಾರ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ ಹಾಗೂ ಲಿಂಗೈಕ್ಯ ಚೆನ್ನಣ್ಣ ದೇಸಾಯಿ ಅವರ ಐದನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿಶ್ವ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗದಗ ಜಿಲ್ಲೆ ಕಪ್ಪತ್ತಗುಡ್ಡಕ್ಕೆ ನಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿದಾಗ ಅಲ್ಲಿ ಒಬ್ಬರೇ ಸ್ವಾಮೀಜಿ ಇದ್ದರು. ಪರಿಸರದ ಉಳಿವಿಗಾಗಿ ಅಮೂಲ್ಯ ಪ್ರಕೃತಿಕ ಸಂಪತ್ತಿನ ರಕ್ಷಣೆಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಪ್ಪತ್ತಗುಡ್ಡದ ಅರಣ್ಯವನ್ನು ರಕ್ಷಿತಾರಣ್ಯ ಎಂದು ಸುಪ್ರೀಂಕೋರ್ಟ್ನಲ್ಲಿ ಆದೇಶ ಬರುವಂತೆ ಮಾಡಿದ ಕೀರ್ತಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲುತ್ತದೆ.ಇಂತಹವರು ಸಿದ್ದೇಶ್ವರ ಸ್ವಾಮಿಜಿಗಳ ನಿಜವಾದ ಶಿಷ್ಯಂದಿರು.ಇAತಹ ಕಾರ್ಯಗಳು ಸಿದ್ದೇಶ್ವರ ಶ್ರೀಗಳಿಗೆ ಸಲ್ಲಿಸಿದ ನಿಜವಾದ ಗೌರವ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮುಧೋಳದ ಡಾ.ಶಿವಾನಂದ ಕುಬಸದ ಮಾತನಾಡಿ , ಅಮೂರ್ತ ರೂಪದಲ್ಲಿರುವ ದೇವರನ್ನು ನಾನು ನಂಬುವುದಿಲ್ಲ.ಆದರೆ ದಾಸೋಹ,ಕಾಯಕವನ್ನು ಗೌರವಿಸುತ್ತೇನೆ.ಎಂದಿಗೂ ನಾನು ದೇವರಿಗೆ ಕೈ ಮುಗಿದಿಲ್ಲ.ದೇಸಾಯಿ ಅವರಿಗೆ ಮನೆತನದ ಸಂಸ್ಕಾರ ಇತ್ತು, ಒಳ್ಳೆಯದನ್ನು ಸ್ವೀಕರಿಸುವ ಗುಣವಿತ್ತು.ನಾನು ಮಾನವತೆಯೇ ದೇವರು ಎಂದು ನಂಬಿದ್ದೇನೆ.ಇAತಹ ಜನಪರ ಕಾರ್ಯಗಳ ಮೂಲಕ ಪ್ರಭುಗೌಡ ದೇಸಾಯಿ ಎತ್ತರದ ಮಟ್ಟಕ್ಕೆ ತಲುಪಿದ್ದಾರೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಎಲ್ಲವೂ ಶ್ರೇಷ್ಠವಾಗಿದೆ.ಮುಖದಲ್ಲಿ ನಗು ಇರಲಿ.ಜಿಲ್ಲೆಯಲ್ಲಿ ಹಾಸ್ಟೆಲ್‌ಗಳಲ್ಲಿ ಸ್ವಚ್ಛತಾ ಅಭಿಯಾನ,ಐಎಎಸ್ ಕೆಎಎಸ್ ತರಬೇತಿ ನೀಡುವ ಕಾರ್ಯ ಆರಂಭಿಸಿದ್ದೇವೆ ಎಂದರು.
ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಸಿಂಧಗಿಯ ಪ್ರಭು ಸಾರಂಗ ಶಿವಾಚಾರ್ಯರು,ಮಸೂತಿಯ ಪ್ರಭುಕುಮಾರ ಸ್ವಾಮೀಜಿ,ಗುಳೇದಗುಡ್ಡ ಕಾಶಿನಾಥ ಸ್ವಾಮೀಜಿ, ಪಡೇಕನೂರ ದಾಸೋಹಮಠದ ಶಿವಕುಮಾರ್ ಸ್ವಾಮೀಜಿ,ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯರು, ಕಮತಗಿ ಕೋಟೆಕಲ್ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ, ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು,ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳದ ನಿರ್ದೇಶ ರಾಮನಗೌಡ ಪಾಟೀಲ ಯತ್ನಾಳ ಇದ್ದರು. ಕಾರ್ಯಕ್ರಮದ ರೂವಾರಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ವಾಗತಿಸಿದರು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಪಾಟೀಲ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಹಾಗೂ ಶಿಕ್ಷಕಿ ಹೇಮಾ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ಅಕ್ಕಮಹಾದೇವಿ ವಚನಗಾಯನವನ್ನು ಸಾಧನಾ ಮಹಿಳಾ ಒಕ್ಕೂಟ,ಯಶಸ್ವಿನಿ ಮಹಿಳಾ ಸಂಘದ ಸದಸ್ಯರು ವಚನ ವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.
ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಕಾರ್ಯಕ್ರಮ;
ವಿಶ್ವ ದಾಸೋಹ ದಿನಾಚರಣೆಯ ಅಂಗವಾಗಿ ಎಸ್.ಎಸ್.ಎಲ್.ಸಿ,ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ಗೌರವಿಸಲಾಯಿತು.ಪೌರಕಾರ್ಮಿಕರು,ಹಿರಿಯರಿಗೆ ಸನ್ಮಾನ ಮಾಡಲಾಯಿತು.ಇದಕ್ಕೂ ಮುನ್ನ ಹಾನಗಲ್ಲ ಕುಮಾರ ಸ್ವಾಮಿಗಳು, ಲಿಂ.ಶಿವಕುಮಾರ ಸ್ವಾಮೀಜಿ,ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ,ಚೆನ್ನಣ್ಣ ದೇಸಾಯಿ ಅವರ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ ಪೂಜ್ಯರಿಗೆ ಪಾದಪೂಜೆ,ಪಾದುಕೆ,ಬೆತ್ತ,ಕೊಡೆ,ವಸ್ತç,ಕಲ್ಲುಸಕ್ಕರೆ,ಉತ್ತತ್ತಿ,ಗುರುಕಾಣಿಕೆ ಸಮರ್ಪಿಸಲಾಯಿತು.ಮದ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸುವ ಮೂಲಕ ವಿಶ್ವ ದಾಸೋಹ ದಿನದ ಕಾರ್ಯಕ್ರಮ ಪ್ರಭುಗೌಡ ದೇಸಾಯಿ ನೇತೃತ್ವದಲ್ಲಿ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.






