ಶoಕರ ಈ.ಹೆಬ್ಬಾಳ
ಮುದ್ದೇಬಿಹಾಳ : ಹೌದು.ಅಕ್ಷರಶಃ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ತರದಲ್ಲಿರುವ ಹುದ್ದೆಗಳಲ್ಲಿರುವವರು ಪ್ರಾಮಾಣಿಕರೇ,ದಕ್ಷರೋ ಎಂದು ಒರೆಗಲ್ಲಿಗೆ ಹಚ್ಚಿ ನವೀರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ಕಳ್ಳರ ಸಂತೆ ನಾಟಕ ವೈಚಾರಿಕ ಚಿಂತನೆಗೆ ಹಚ್ಚಿತು.
ರಾಜ್ಯದಲ್ಲಿ ತೀವ್ರ ಬರಗಾಲ ಬಿದ್ದ ಸಮಯದಲ್ಲಿ ಅರಮನೆಯಲ್ಲಿನ ಖಜಾನೆ ಲೂಟಿಗೆ ಬರುವ ಕಳ್ಳರಿಬ್ಬರಲ್ಲಿ ಓರ್ವ ಕಳ್ಳ ತಾನು ನಂಬಿದ ವಿದ್ಯೆಯನ್ನು ತನ್ನ ಜೀವ ಉಳಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದನ್ನು ನಾಟಕ ನಿರೂಪಿಸಿತು.
ಕೃಷ್ಣಮೂರ್ತಿ ಎಸ್.ತಾಳಿಕಟ್ಟಿ ರಚಿಸಿ ನಿದೇರ್ಶನ ಮಾಡಿದ ನಾಟಕವನ್ನು ಶಿವಸಂಚಾರ ಕಲಾ ತಂಡದ ಸದಸ್ಯರು ನಟಿಸಿದರು.
ಮಳೆ ಬೀಜ ಬಿತ್ತಲು ಜೀವನದಲ್ಲಿ ಯಾವುದೆ ತಪ್ಪು ಮಾಡದ,ಸುಳ್ಳು ಹೇಳದ,ನಂಬಿಕೆ ದ್ರೋಹ ಎಸಗದ ವ್ಯಕ್ತಿ ಸಿಗದೇ ಇರುವುದನ್ನು ನಾಟಕದಲ್ಲಿ ಪಾತ್ರಧಾರಿಗಳು ಮನೋಜ್ಞವಾಗಿ ಅಭಿನಯಿಸಿ ತೋರಿಸಿದರು.ರಾಜ್ಯ ಆಳುವ ಅರಸ,ಮಂತ್ರಿ,ನ್ಯಾಯ ಹೇಳುವ ನ್ಯಾಯಾಧೀಶ,ಧರ್ಮಶಾಸ್ತç ಹೇಳುವ ಸ್ವಾಮೀಜಿ,ರಾಜ್ಯ ಆಳುವ ರಾಜಕಾರಣಿ, ಕಳ್ಳರನ್ನು ಹಿಡಿಯುವ ಪೊಲೀಸ್ ಅಧಿಕಾರಿಗಳಿಂದಲೂ ಮಳೆ ಬೀಜ ಬಿತ್ತಲು ಆಗದೇ ಇರುವುದನ್ನು ನಾಟಕ ವ್ಯವಸ್ಥೆಯಲ್ಲಿ ಯಾರೊಬ್ಬರೂ ಪ್ರಾಮಾಣಿಕರಲ್ಲ ಎಂಬುದನ್ನು ಬಿಂಬಿಸಿತು.
ಕೊನೆಗೆ ರೈತರೇ ಮಳೆ ಬೀಜವನ್ನು ಬಿತ್ತಿ ನಾಡಿಗೆ ಅನ್ನ ನೀಡುತ್ತಾರೆ ಎಂಬ ಸಂದೇಶವನ್ನು ನಾಟಕ ನೀಡಿತು.ವಿಶ್ವ ದಾಸೋಹ ದಿನದ ಅಂಗವಾಗಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ನೇತೃತ್ವದಲ್ಲಿ ಮೂರು ದಿನದ ನಾಟಕೋತ್ವವದಲ್ಲಿ ಎರಡನೇ ದಿನದ ನಾಟಕ ಜನರನ್ನು ನಗಿಸುವುದರೊಂದಿಗೆ ವೈಚಾರಿಕ ಚಿಂತನೆಗೀಡು ಮಾಡಿತು.






