ಮುದ್ದೇಬಿಹಾಳ : ಪ್ರಸ್ತುತ ವಿಜಯಪುರ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾರಹಿತ ಪದವಿ ಕಾಲೇಜುಗಳು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ವಿಜಯಪುರ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳನ್ನು ಬಾಗಲಕೋಟಿ ಜಿಲ್ಲೆಯ ಜಮಖಂಡಿಯಲ್ಲಿರುವ ವಿಶ್ವವದ್ಯಾಲಯಕ್ಕೆ ಸೇರಿಸುವ ಬಹಳಷ್ಟು ಹುನ್ನಾರ ನಡೆದಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯ ಎಲ್ಲ ಕಾಲೇಜುಗಳನ್ನು ವಿಜಯಪುರದಲ್ಲಿ ಈಗಾಗಲೇ ಇರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಕೂಡಿಸಿದರೆ ಸರ್ಕಾರಕ್ಕೆ ಯಾವುದೇ ರೀತಿಯ ಹಣಕಾಸಿನ ಭಾರವಾಗಲಿ ಅಥವಾ ಸ್ಥಳಾವಕಾಶದ ಕೊರತೆ ಆಗುವುದಿಲ್ಲ.
ಯು.ಜಿ.ಸಿ. ನಿಯಮಾವಳಿಯ ಪ್ರಕಾರ ಜಿಲ್ಲೆಗೊಂದು ವಿಶ್ವವಿದ್ಯಾಲಯ ಇರಬೇಕೆಂದು ನಿಯಮವಿರುವದರಿಂದ ನಮಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಶ್ವವಿದ್ಯಾಲಯಕ್ಕೆ ಸೇರಿಸುವ ಬದಲು ವಿಜಯಪುರ ಜಿಲ್ಲೆಗೆ ಒಂದು ಪ್ರತ್ಯೇಕವಾದ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ಕಾಲೇಜುಗಳಿಂದ ಈಗಾಗಲೇ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದಾಲಯದಿಂದ ಸಂಯೋಜನಾ ಶುಲ್ಕ, ಠೇವಣಿ ಶುಲ್ಕ, ಕಾಲೇಜು ಮುಂದುವರಿಕೆ ಮತ್ತು ವಿಸ್ತರಣೆ ಶುಲ್ಕ, ಪ್ರವೇಶ ಮಿತಿ ಹೆಚ್ಚಳ ಶುಲ್ಕ ಅಲ್ಲದೇ ವಿದ್ಯಾರ್ಥಿಗಳ ಶುಲ್ಕದಲ್ಲಿ ಕೂಡಾ ಸಾಕಷ್ಟು ವ್ಯತ್ಯಾಸವಿರುತ್ತದೆ. ಹೀಗೆ ಹತ್ತು ಹಲವಾರು ಶುಲ್ಕಗಳ ಭಾರದಿಂದ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳು ನಲುಗಿ ಹೋಗಿರುತ್ತವೆ ಎಂದು ತಿಳಿಸಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸರ್ಕಾರದ ನಿಯಮಾವಳಿ ಪ್ರಕಾರ ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬಂದವರೇ ವಿನಃ ಇಷ್ಟಪಟ್ಟು ಬಂದಿಲ್ಲ.ಇವತ್ತು ಕೂಡಾ ಕರ್ನಾಟಕ ವಿಶ್ವವಿದ್ಯಾಲಯ ಶುಲ್ಕಕ್ಕೂ ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶುಲ್ಕಕ್ಕೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಸರ್ಕಾರ ಗಮನಿಸಬೇಕು ಎಂದು ತಿಳಿಸಿದ್ದಾರೆ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಮಹಿಳೆಯರಿಗಾಗಿಯೇ ಮೀಸಲು ಇರುವುದರಿಂದ ನಿಮ್ಮ ವಿಶ್ವವಿದ್ಯಾಲಯವು ಯಥಾವತ್ತಾಗಿ ಇರಲಿ ಮತ್ತು ರಾಣಿಚನ್ನಮ್ಮ ವಿಶ್ವವಿದ್ಯಾಲಯ ಅಡಿಯಲ್ಲಿರುವ ವಿಜಯಪುರ ಜಿಲ್ಲೆಯ ಎಲ್ಲ ಕಾಲೇಜುಗಳು ಅಕ್ಕಮಹಾದೇವಿ ಮಹಿಳಾ ಆಡಳಿತಕ್ಕೆ ಒಳಪಡುವುದರಿಂದ ಮಹಿಳಾ ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿಯು ಕೂಡಾ ಉತ್ತಮವಾಗುದಲ್ಲದೆ ನಮ್ಮ ಜಿಲ್ಲೆಯ ಕಾಲೇಜುಗಳಿಗೂ ತುಂಬಾ ಅನುಕೂಲುವಾಗುವುದು. ನಮ್ಮನ್ನು ಯಾಕೆ ಬಾಗಲಕೋಟ ಜಿಲ್ಲೆಯ ಜಮಖಂಡಿ ವಿಶ್ವವಿದ್ಯಾಲಯಕ್ಕೆ ಸೇರಿಸುತ್ತೀರಿ ? ಅದು ಬೇಡವೇ ಬೇಡ ಎಂದು ಒತ್ತಾಯಿಸಿದ್ದಾರೆ.
ಅವಿಭಜಿತ ವಿಜಯಪುರ ಜಿಲ್ಲೆಯು ಬಾಗಲಕೋಟೆ ಒಳಗೊಂಡು ಬಹುದೊಡ್ಡ ಜಿಲ್ಲೆಯಾಗಿತ್ತು ಅದನ್ನು ಈಗ ವಿಭಜಿತವಾದ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕಿಗೆ ವಿಶ್ವವಿದ್ಯಾಲಯವನ್ನು ನೀಡಲಾಗಿದೆ.ಪುರಾತನ ಇತಿಹಾಸ ಪುಟದಲ್ಲಿ ರಾರಾಜಿಸುವ ಬಹುದೊಡ್ಡ ವಿಜಯಪುರ ಜಿಲ್ಲೆಯನ್ನು ಸರ್ಕಾರ ಮರೆತಿರುವ ಕಾರಣ ವಿಜಯಪುರ ಜಿಲ್ಲೆಯ ರಾಜಕೀಯ ಧುರೀಣರ ಇಚ್ಚಾಶಕ್ತಿಯ ಕೊರತೆಯಿಂದ ಅನ್ಯ ಜಿಲ್ಲೆಯ ವಿವಿ ಅಡಿ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ.ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ,ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ,ಸಿಂದಗಿಯ ಶಾಸಕ ಅಶೋಕ ಮನಗೂಳಿ ಅವರಿಗೆ ಬರಗಾಲ ಪಿಡಿತವಾದ ವಿಜಯಪುರ ಜಿಲ್ಲೆಯ ಬಡಮಕ್ಕಳ ಶಿಕ್ಷಣಕ್ಕೆ ಎಳ್ಳಷ್ಟು ಕಾಳಜಿ ಇಲ್ಲವಾಗಿದೆ ಎಂದು ದೂರಿದ್ದಾರೆ.
ಪ್ರತ್ಯೇಕ ವಿಶ್ವವಿದ್ಯಾಲಯ ಆಗ್ರಹಕ್ಕೂ ಮುನ್ನ ಮವಿವಿಗೆ ಸೇರ್ಪಡೆ ಮಾಡಿ: ವಿಜಯಪುರ ಜಿಲ್ಲೆ ಎಲ್ಲ ಪದವಿ ಕಾಲೇಜುಗಳ ಆಡಳಿತ ಮಂಡಳಿಯವರು ನಮ್ಮ ಪ್ರತ್ಯೇಕವಾದ ವಿಶ್ವವಿದ್ಯಾಲಯ ಕೊಡಬೇಕೆಂಬ ಕೂಗು ಕೇಳುವ ಪೂರ್ವದಲ್ಲಿಯೇ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಧಾನಸಭೆಯಲ್ಲಿ ನಮ್ಮೆಲ್ಲ ಕಾಲೇಜುಗಳ ಪರವಾಗಿ ದ್ವನಿ ಎತ್ತಬೇಕು ಎಂದು ಸಗರಿ ಆಗ್ರಹಿಸಿದ್ದಾರೆ.



