ಮುದ್ದೇಬಿಹಾಳ : ಮಾರುಕಟ್ಟೆಗೆ ಹೋಗುವ ಮುನ್ನ ನಿಮ್ಮ ಜೊತೆಗೆ ಕೈಯ್ಯಲ್ಲಿ ಬಟ್ಟೆಯ ಬ್ಯಾಗನ್ನು ತೆಗೆದುಕೊಂಡು ಹೊರಗಡೆ ತೆರಳಿದರೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಗ್ರಿ ತರುವ ಪ್ರಮೇಯ ಬರುವುದಿಲ್ಲ.ಆ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಐದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ,ನ್ಯಾಯವಾದಿಗಳ ಸಂಘ ಹಾಗೂ ಪುರಸಭೆ ಸಹಯೋಗದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನದ ಕಾರ್ಯಕ್ರಮದಲ್ಲಿ ನ್ಯಾಯಾಲಯದ ಆವರಣದಲ್ಲಿ ಶ್ರಮದಾನ ಮಾಡಿ ಮಾತನಾಡಿದರು.ಮನೆಯ ಸುತ್ತಮುತ್ತ,ಕಚೇರಿಗಳ ಸುತ್ತಮುತ್ತ ಶುಚಿತ್ವ ಕಾಪಾಡಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯವಿದೆ ಎಂದರು.
ಸಿವ್ಹಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮಾತನಾಡಿ, ಊರಿನ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾದದ್ದು.ರಾಷ್ಟ್ರೀಯಸ್ವಚ್ಛತಾ ದಿನದಂದು ನಾವೆಲ್ಲ ಸ್ವಚ್ಛತೆಯ ಪ್ರತಿಜ್ಞೆ ಕೈಗೊಳ್ಳಬೇಕು.ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಕ್ಕೆ ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಬೇಕು.ಬಟ್ಟೆ ಕೈಚೀಲಗಳನ್ನು ಹೆಚ್ಚು ಬಳಕೆ ಮಾಡುವಂತೆ ಸಲಹೆ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಸ್ವಚ್ಛತಾ ಹೀ ಸೇವಾ ಅಭಿಯಾನದಂಗವಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹ, ಪ್ಲಾಸ್ಟಿಕ್ ಬಳಕೆ ನಿಷೇಧದ ಜಾಗೃತಿ ಪುರಸಭೆಯಿಂದ ಕೈಗೊಂಡಿದ್ದೇವೆ.ಮಹಿಳೆಯರಿoದಲೇ ಪ್ಲಾಸ್ಟಿಕ್ ನಿಷೇಧದ ಕಾರ್ಯ ಯಶಸ್ವಿಯಾಗಲು ಸಾಧ್ಯವಿದೆ.ಮನೆಯಲ್ಲಿ ಬಟ್ಟೆ ಚೀಲ ಬಳಕೆಗೆ ಪ್ರೋತ್ಸಾಹಿಸಬೇಕು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ,ಪುರಸಭೆ ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ ಮಾತನಾಡಿದರು.ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು,ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.



