ಮುದ್ದೇಬಿಹಾಳ: ಅಮವಾಸ್ಯೆಯ ಪ್ರಯುಕ್ತ ಎತ್ತುಗಳನ್ನು ತೊಳೆಯಲು ಕೃಷ್ಣಾ ನದಿ ತೀರಕ್ಕೆ ತೆರಳಿದ್ದ ರೈತರೊಬ್ಬರನ್ನು ಮೊಸಳೆ ಎಳೆದುಕೊಂಡು ಹೋಗಿರುವ ಘಟನೆ ತಾಲ್ಲೂಕಿನ ಕುಂಚಗನೂರ ಗ್ರಾಮದಲ್ಲಿ ಶನಿವಾರ ನಡೆದಿದೆ.
ತಂಗಡಗಿ ಗ್ರಾ.ಪಂ ವ್ಯಾಪ್ತಿಯ ಕುಂಚಗನೂರ ಗ್ರಾಮದ ಪಂಪಹೌಸ್ ಬಳಿ ಈ ಘಟನೆ ನಡೆದಿದೆ.
ಕುಂಚಗನೂರ ಗ್ರಾಮದ ಕಾಶೀನಾಥ ಹಣಮಂತ ಕಂಬಳಿ(38) ಎಂಬುವರೇ ಮೊಸಳೆ ದಾಳಿಗೆ ಒಳಗಾಗಿ ನಾಪತ್ತೆಯಾದವರು.
ಕಾಶೀನಾಥ ಅಮವಾಸ್ಯೆಯ ಹಿನ್ನೆಲೆ ಎತ್ತುಗಳನ್ನು ತೊಳೆಯಲೆಂದು ಹೋದಾಗ ಮೊಸಳೆ ದಾಳಿ ಮಾಡಿ ಅವರನ್ನು ಹೊತ್ತೊಯ್ದಿದ್ದನ್ನು ನೋಡಿರುವುದಾಗಿ ಕುಂಚಗನೂರ ಗ್ರಾಮದ ಧರೆಪ್ಪ ಬಟಕುರ್ಕಿ ಎಂಬುವರು ತಿಳಿಸಿದ್ದಾರೆ.
ಕಾರ್ಯಾಚರಣೆ: ಕಂದಾಯ ಪೊಲೀಸ್, ಅಗ್ನಿಶಾಮಕ ಇಲಾಖೆಯಿಂದ ಮೊಸಳೆ ಹೊತ್ತೊಯ್ದಿರುವ ವ್ಯಕ್ತಿಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಕೂಡಲಸಂಗಮದಿಂದ ಬೋಟ್ ತರಿಸಲಾಗಿದ್ದು ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಸ್ಥಳದಲ್ಲಿ ಕಂದಾಯ ನಿರೀಕ್ಷಕ ಪವನ್ ತಳವಾರ, ಗ್ರಾಮ ಆಡಳಿತ ಅಧಿಕಾರಿ ಎಚ್. ಸಿ. ಕೊರಬು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದಾರೆ.