ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾನು ನೋಡಿಕೊಂಡೇ ಬಂದಿದ್ದು ಸರಿಯಾದ ಸ್ಪಂದನೆ ಸಿಗುವುದಿಲ್ಲ. ಇಲ್ಲಿ ‘ಹಲವು ರೀತಿಯ ವ್ಯವಹಾರ’ ನಡೆಯುತ್ತವೆ ಎಂದು ಹೆಸ್ಕಾಂ ಗ್ರಾಹಕರ ಸಲಹಾ ಸಮೀತಿ ಸದಸ್ಯೆ ಕವಿತಾ ದಡ್ಡಿ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಗುರುವಾರ ಗ್ರಾಹಕರ ಸಲಹಾ ಸಮಿತಿಗೆ ನೇಮಕಗೊಂಡ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಆಲದಮರದ ಕಟ್ಟೆ,ಈಶ್ವರ ಗುಡಿಯಲ್ಲಿ ಅನಧಿಕೃತ ವ್ಯಕ್ತಿಗಳು ಇಸ್ಪೀಟ್ ಆಡುತ್ತಾ ಕೂರುತ್ತಾರೆ. ಕಚೇರಿಗೆ ಬಿಲ್ ತುಂಬಲು ಬರುವ ಮಹಿಳೆಯರು ಮುಜುಗರದಿಂದ ಕಚೇರಿಗೆ ಬರುವ ದುಸ್ಥಿತಿ ಇದೆ. ಕಚೇರಿಯಲ್ಲಿ ಯಾವುದಕ್ಕೂ ಸರಿಯಾದ ಸ್ಪಂದನೆ ಸಿಗುವುದಿಲ್ಲ. ಗ್ರಾಹಕರಿಗೆ ಒಳ್ಳೆಯ ಸೇವೆ ಕೊಡುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ಹೆಸ್ಕಾಂ ಸ್ಟೇಷನ್‌ದಲ್ಲೂ ನಡೆಯಬಾರದ ಚಟುವಟಿಕೆಗಳು ನಡೆಯುತ್ತವೆ ಎಂಬ ದೂರುಗಳಿವೆ. ಇಲ್ಲಿ ನಿಮ್ಮದೇ ಸಿಬ್ಬಂದಿಯ ವಸತಿಗೃಹಗಳಿದ್ದು ಮಹಿಳೆಯರು, ಮಕ್ಕಳು ಇರುತ್ತಾರೆ. ಅವರ ಮೇಲೆ ಕಚೇರಿ ಆವರಣದಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗಳು ಪರಿಣಾಮ ಬೀರುತ್ತವೆ. ಇದಕ್ಕೆಲ್ಲ ಇನ್ನು ಮುಂದೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.
ರೈತರ ಪ್ರತಿನಿಧಿ ಸಾಯೇಬಣ್ಣ ವಾಲೀಕಾರ ಮಾತನಾಡಿ, ಹೆಸ್ಕಾಂ ನಿಂದ ನೇಬಗೇರಿ, ಕೋಳೂರು, ಹಡಲಗೇರಿ ಭಾಗದಲ್ಲಿ ತೋಟಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಹೆಸ್ಕಾಂ ಎಇಇ ಆರ್.ಎನ್.ಹಾದಿಮನಿ ಮಾತನಾಡಿ, ಗ್ರಾಹಕರ ಸಲಹಾ ಸಮಿತಿ ಸದಸ್ಯರು ಕಚೇರಿ ಆವರಣದಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಈಗಾಗಲೇ ಭಾಗಶಃ ಕಡಿವಾಣ ಹಾಕಿದ್ದು ಪೊಲೀಸರ ಗಮನಕ್ಕೆ ತಂದು ಕಚೇರಿಯ ಆವರಣದಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೇ ಕಚೇರಿ ಆವರಣದಲ್ಲಿ ಸಿಸಿ ಟಿವಿ ಅಳವಡಿಕೆ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಸಮೀತಿ ಸದಸ್ಯ ಸಿಕಂದರ್ ಜಾನ್ವೇಕರ, ನಾಗೇಶ ಭಜಂತ್ರಿ, ಬಸಲಿಂಗಪ್ಪಗೌಡ ಬಿರಾದಾರ, ಹೆಸ್ಕಾಂ ಸೆಕ್ಷನ್ ಅಧಿಕಾರಿಗಳಾದ ಮಲ್ಲಿಕಾರ್ಜುನ ಹೊಳಿ, ಎಂ. ಎಸ್. ತೆಗ್ಗಿನಮಠ, ಬಿ. ಎಸ್. ಯಲಗೋಡ, ಎ. ಎನ್. ಬಿರಾದಾರ, ಸಂತೋಷ ನಡಗೇರಿ, ಮೈನೂದ್ದೀನ ಜಹಾಗೀದಾರ, ಲೆಕ್ಕಾಧಿಕಾರಿ ಬಿ. ಎ. ಮಡಿವಾಳರ, ಕುಂಟೋಜಿ ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ,ಮೈಬೂಬ ದಖನಿ ಇದ್ದರು.
ಹೆಸ್ಕಾಂ ಕಚೇರಿಯ ಆವರಣ ಮಳೆ ಬಂದರೆ ಸಾಕು ತಗ್ಗುದಿನ್ನೆಗಳಿಂದ ಆವರಿಸುತ್ತದೆ. ಬಿಲ್ ಕಲೆಕ್ಟರ್‌ಗಳಿಂದ ಸರಿಯಾಗಿ ಕೆಲಸ ಮಾಡಿಸಿಕೊಳ್ಳಬೇಕು. ಕುಡಿದು ಕೆಲವರು ಕಚೇರಿ ಬರುತ್ತಾರೆ. ಸಿಬ್ಬಂದಿ, ನೌಕರರ ಮೇಲೆ ಮೇಲಧಿಕಾರಿಗಳು ಸರಿಯಾದ ಬಿಗಿ ಇಟ್ಟುಕೊಳ್ಳಬೇಕು. ಹೆಸ್ಕಾಂ ಕಚೇರಿಯ ಹೊರಗಡೆ ನಾಮಫಲಕ ಹಾಕಬೇಕು.
ಹೆಸ್ಕಾಂ ಗ್ರಾಹಕರ ಸಲಹಾ ಸಮೀತಿ ಸದಸ್ಯರು