ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿಗೆ ಪಾದಯಾತ್ರೆ ಹೊರಟಿದ್ದವರ ಮೇಲೆ ಖಾಸಗಿ ಸ್ವೀಪರ್ ಕೋಚ್ ಬಸ್ ಹರಿದು (Accident) ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ನಾಲ್ವರು ಭಕ್ತರು ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ನಡೆದಿದ್ದು, ಮತ್ತೊಂದು ಪ್ರಕರಣದಲ್ಲಿ ಬೈಕ್ ಡಿಕ್ಕಿಯಾಗಿ ಪಾದಯಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಅನ್ನಪೂರ್ಣ(40), ಪ್ರಕಾಶ್(25), ಶರಣಪ್ಪ(19) ಮೃತರು. ಇವರ ಮೇಲೆ ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ವೀಪರ್ ಕೋಚ್ ಬಸ್ ನಿಯಂತ್ರಣ ತಪ್ಪಿ ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ.
ಕಳೆದ ಎರಡು ದಿನಗಳ ಹಿಂದೆ ತಮ್ಮ ಗ್ರಾಮದಿಂದ ಹುಲಗಿಯ ಹುಲಿಗೇಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ಇನ್ನು ಕೇವಲ 3 ಗಂಟೆ ಕಳೆದರೆ ಹುಲಿಗೇಮ್ಮ ದೇವಸ್ಥಾನವನ್ನು ಪಾದಯಾತ್ರಿಗಳು ತಲುಪುತ್ತಿದ್ದರು. ಆದರೆ, ಅದಕ್ಕೂ ಪೂರ್ವದಲ್ಲಿಯೇ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ನಾಲ್ಕು ಜನರಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ.