
ಮುದ್ದೇಬಿಹಾಳ : ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳ ಸಂಖ್ಯಾ ಬಲ ಇಲ್ಲದೇ ಮುಚ್ಚಲ್ಪಟ್ಟಿದ್ದ ತಾಲೂಕಿನ ಢವಳಗಿ ಗ್ರಾಮದ ಶ್ರೀ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆಯನ್ನು ಸಂಸ್ಥೆಯ ಆಡಳಿತ ಮಂಡಳಿಯವರು ತಮ್ಮ ಸಂಬಂಧಿಕರನ್ನೇ ಕಾನೂನು ಬಾಹಿರವಾಗಿ ಸಂಸ್ಥೆಗೆ ನೇಮಕ ಮಾಡಿಕೊಂಡು ಶಾಲೆ ನಿರಂತರವಾಗಿ ನಡೆದಿದೆ ಎಂದು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಇಲಾಖೆಗೆ ನೀಡಿ ಅನುದಾನ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ವಂಚಿಸಿದ್ದಾರೆ’ ಎಂದು ಹೋರಾಟಗಾರ, ವಕೀಲ ಚೇತನ ಶಿವಶಿಂಪಿ ದೂರಿದ್ದಾರೆ.

ತಾಲ್ಲೂಕಿನ ಢವಳಗಿ ಬಸವ ಬಾಲ ಭಾರತಿ ಶಿಕ್ಷಣ ಸಂಸ್ಥೆಯವರು ಮಾಡಿರುವ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಅವರು, ಈ ಬಗ್ಗೆ ಹಲವು ದೂರುಗಳನ್ನು ನೀಡಿದಾಗ ಮುದ್ದೇಬಿಹಾಳದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತನಿಖೆಗೆ ತ್ರಿ ಸದಸ್ಯರ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕರು 9 ಜನರ ತನಿಖಾ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡಗಳು ಈ ಶಾಲೆಯಲ್ಲಿ ಶಾಲಾ ಮಾನ್ಯತೆ ನವೀಕರಣ, ಪಿಟಿಆರ್, ಸಂದರ್ಶನ ವರದಿ ಸೇರಿದಂತೆ ಶಾಲೆ ಪ್ರಾರಂಭದಿಂದ ಅನುದಾನ ಪಡೆಯುವವರೆಗೆ ನಿರಂತರವಾಗಿ ನಡೆದಿರುವ ಬಗ್ಗೆ ಇಲಾಖಾ ನಿಯಮಗಳನ್ವಯ ಖಚಿತಪಡಿಸುವ ಹಲವು ದಾಖಲೆಗಳು ಇಲ್ಲದಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಶಾಲೆಯ ಮೇಲೆ ಕಾನೂನು ಕ್ರಮವಾಗಿ ಬೋಧಕ ಸಿಬ್ಬಂದಿಗಳು ಈವರೆಗೆ ಪಡೆದ ವೇತನವನ್ನು ಮರಳಿ ಸರ್ಕಾರಕ್ಕೆ ಭರಣಾ ಮಾಡುವ ಮತ್ತು ಬೋಧಕ ಸಿಬ್ಬಂದಿಗಳ ಸಹಿತ ಆಡಳಿತ ಮಂಡಳಿ ಕ್ರಿಮಿನಲ್ ಪ್ರಕರಣವನ್ನು ಎದುರಿಸುವ ಹಂತದಲ್ಲಿದ್ದು, ಇಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುತ್ತಿರುವ ನನ್ನ ಮೇಲೆ ಸಂಸ್ಥೆಯವರು ರೂ.40 ಲಕ್ಷಕ್ಕೆ ಬೇಡಿಕೆ ಇಟ್ಟಿರುವದಾಗಿ ಮತ್ತು ನನ್ನ ತಾಯಿಯವರು ಇದೇ ಶಾಲೆಯಲ್ಲಿ ಸಹ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದು ಈ ಬಗ್ಗೆ ನಕಲಿ ಪ್ರಮಾಣ ಸೃಷ್ಟಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ತನಿಖೆಯ ದಿಕ್ಕು ತಪ್ಪಿಸಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.