ಮುದ್ದೇಬಿಹಾಳ: ಪೊಲೀಸರು ಬೈಕ್ ಕಳ್ಳನೋರ್ವನನ್ನು ಬಂಧಿಸಿ ಆತನಿಂದ ಮೂರು ವಿವಿಧ ಕಂಪನಿ ಬೈಕ್‌ಗಳು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಳಿಕೋಟಿ ತಾಲ್ಲೂಕು ಕಲಕೇರಿಯ ನಿವಾಸಿ ಹಾಲಿ ವಸ್ತಿ ಆಶ್ರಯ ಕಾಲನಿಯ ನಿವಾಸಿಯಾಗಿದ್ದ ಸಿಕಂದರ ನಾಯ್ಕೋಡಿ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.11ರಂದು 2024 ರಂದು ತಮ್ಮ ಬೈಕ್ ಕಳ್ಳತನವಾಗಿದೆ ಎಂದು ಬ.ಬಾಗೇವಾಡಿ ತಾಲ್ಲೂಕು ಕಾನ್ನಾಳದ ನಿವಾಸಿ, ಹಾಲಿ ವಸ್ತಿ ಮುದ್ದೇಬಿಹಾಳದ ಆಶ್ರಯ ಕಾಲನಿಯಲ್ಲಿರುವ ಉಮೇಶ ಹಡಪದ ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತ ಆರೋಪಿಯಿಂದ ಹೋಂಡಾ ಕಂಪನಿ, ಹಿರೋ ಹೋಂಡಾ ಹಾಗೂ ಬಜಾಜ ಪ್ಲಾಟಿನಾ ಕಂಪನಿಯ ಬೈಕಗಳನ್ನು ವಶಕ್ಕೆ ಪಡೆದಿದ್ದಾರೆ.ಅಲ್ಲದೇ ಆತನಿಂದ 45 ಗ್ರಾಂ ವಿವಿಧ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಕಳ್ಳತನ ಮಾಡಿದ ಒಟ್ಟು ವಸ್ತುಗಳ ಮೌಲ್ಯ 5.24 ಲಕ್ಷ ರೂ.ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಪತ್ತೆ ಹಚ್ಚಲು ಶ್ರಮಿಸಿದ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಲ್.ಮನ್ನಾಭಾಯಿ, ಸಿಬ್ಬಂದಿ ಬಿ.ಕೆ.ಗುಡಿಮನಿ, ಆರ್.ಎಸ್.ಪಾಟೀಲ್, ಪಿ.ಎಸ್.ಠಾಣೇದ, ವಿ.ಎನ್.ಹಾಲಗಂಗಾಧರಮಠ, ರಮೇಶ ಮದರಿ ಶ್ರಮಿಸಿದ್ದು ಅವರಿಗೆ ಎಸ್ಪಿ ಅವರು ಪ್ರಶಂಸಾ ಪತ್ರ,ಬಹುಮಾನ ಘೋಷಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.