ವಿಜಯಪುರ: ನಗರದಲ್ಲಿ ಮಂಗಳಮುಖಿಯೊಬ್ಬರನ್ನು ಸಾರ್ವಜನಿಕರ ಎದುರಲ್ಲೇ ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ, ಅಮಾನವೀಯವಾಗಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
‘ಹಲ್ಲೆಗೊಳಗಾಗಿರುವ ಸಂತ್ರಸ್ತೆಯು ಮಂಗಳಮುಖಿಯಲ್ಲ, ಯುವತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ತೃತೀಯಲಿಂಗಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.
ತೃತೀಯ ಲಿಂಗಿಗಳಾದ ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಬಸವಣ್ಣ ಕ್ಯಾಂಪಿನ ಜಿ.ಹುಲಗೆಮ್ಮ(26), ಮಹಾರಾಷ್ಟ್ರ ರಾಜ್ಯದ ಲಾತೂರು ಜಿಲ್ಲೆಯ ಸತಾಳ ಗ್ರಾಮದ ಕವಿತಾ(26), ಯಾದಗಿರಿ ಜಿಲ್ಲೆ ನಾರಾಯಣಪುರದ ಮಹಾನಮ್ಮ(48), ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕು ಕೊಣ್ಣೂರಿನ ಅಶ್ವಿನಿ(23) ಹಾಗೂ ಯಾದಗಿರಿ ಜಿಲ್ಲೆ ಗದ್ದೆಮ್ಮಕಟ್ಟೆಯ ಬಸಮ್ಮ(28) ಎಂಬುವವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ತೃತೀಯ ಲಿಂಗಿ ಪರಾರಿಯಾಗಿರುವುದಾಗಿ ಅವರು ಹೇಳಿದರು.
ಬಂಧಿತ ಎಲ್ಲ ಆರೋಪಿಗಳು ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದು, ಅಲ್ಲಿಂದ ಬಂದು ಈ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ವಿಜಯಪುರ ನಗರದ ಲಲಿತ್ ಮಹಲ್ ಹೋಟೆಲ್ ಎದುರು ಜೂನ್ 21ರಂದು ಪ್ರಕರಣ ನಡೆದಿತ್ತು. ಆದರೆ, ಈ ಬಗ್ಗೆ ಯಾರೂ ದೂರು ನೀಡಿರಲಿಲ್ಲ. ಪೊಲೀಸರ ಗಮನಕ್ಕೂ ಬಂದಿರಲಿಲ್ಲ ಎಂದರು.
ಜುಲೈ 31ರಂದು ಹಲ್ಲೆ ಪ್ರಕರಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ತಂಡ ರಚಿಸಲಾಗಿತ್ತು. ಕೇವಲ 24 ತಾಸಿನೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಹಲ್ಲೆಗೊಳಗಾದ ಯುವತಿಯು ವಿಜಯಪುರ ಸಮೀಪದ ಅರಕೇರಿ ಗ್ರಾಮದವಳಾಗಿದ್ದು, ಪುಣೆಯಲ್ಲಿ ತೃತೀಯಲಿಂಗಿಗಳ ಜೊತೆಗೆ ಇದ್ದಳು. ಅವರ ನಡುವೆ ವೈಯಕ್ತಿಕ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಯುವತಿಯು ವಿಜಯಪುರಕ್ಕೆ ಮರಳಿದ್ದಾಳೆ. ಆರೋಪಿಗಳು ಹುಡುಕಿಕೊಂಡು ಬಂದು ಹಲ್ಲೆ ನಡೆಸಿ, ವಾಪಸ್ ಪುಣೆಗೆ ಪರಾರಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.
ವ್ಯಾಪಕ ಖಂಡನೆ: ಯುವತಿಯನ್ನು ಬೆತ್ತಲೆಗೊಳಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿರುವ ದೃಶ್ಯವನ್ನು ಕಂಡು ಸಾರ್ವಜನಿಕರು, ವಿವಿಧ ಸಂಘ,ಸಂಸ್ಥೆಗಳು, ರಾಜಕೀಯ ಪಕ್ಷಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.