ಮುದ್ದೇಬಿಹಾಳ : ಪಟ್ಟಣದಲ್ಲಿ 2000ಇಸ್ವಿಯಲ್ಲಿ ಸ್ಥಾಪನೆಗೊಂಡಿರುವ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ 25ನೇ ವರ್ಷದ ರಜತಮಹೋತ್ಸವವನ್ನು ಸೆ.23 ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು.
ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾನ ಮನಸ್ಕರು ತಾಲ್ಲೂಕಿನಲ್ಲಿರುವ ದೇವಾಂಗ ನೇಕಾರ ಸಮಾಜದವರ ಆರ್ಥಿಕ ಬೆಳವಣಿಗೆಗಾಗಿ 25ವರ್ಷಗಳ ಹಿಂದೆ ಸಂಘವನ್ನು ಸ್ಥಾಪಿಸಿದ್ದು ಸಂಘವು ಲಾಭದಲ್ಲಿ ಮುನ್ನಡೆದಿರುವುದು ಸಂತಸದ ವಿಷಯ ಎಂದರು.
ಮುದ್ದೇಬಿಹಾಳ ಕಿಲ್ಲಾ ಹೊಸಮಠದ ಅಮರೇಶ್ವರ ದೇವರು ದಿವ್ಯಸಾನಿಧ್ಯ ವಹಿಸಲಿದ್ದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ, ಬಾಗಲಕೋಟ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ,ಸಹಾಯಕ ನಿಬಂಧಕ ಚೇತನ ಭಾವಿಕಟ್ಟಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉದ್ಯಮಿದಾರ ಸತೀಶ ಓಸ್ವಾಲ, ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ, ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ, ನೇಕಾರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಹುಲಮನಿ ಆಗಮಿಸುವರು ಎಂದು ತಿಳಿಸಿದರು.
ಸಂಘದ ಪ್ರಧಾನ ವ್ಯವಸ್ಥಾಪಕರಾದ ವಿ.ಎಸ್.ಪ್ಯಾಟಿಗೌಡರ ಮಾತನಾಡಿ, ಸಂಘವು ಇಂದು ಎಂಟು ಕೋಟಿ ರೂ.ಗಳಿಗೂ ಅಧಿಕ ವ್ಯವಹಾರವನ್ನು ಹೊಂದಿದೆ.ನಾಲತವಾಡದಲ್ಲಿ ಫೆಬ್ರುವರಿ ತಿಂಗಳಲ್ಲಿ ಶಿರಹಟ್ಟಿ ಬಾಳೆಹೊಸೂರಿನ ದಿಂಗಾಲೇಶ್ವರ ಸ್ಮಾಮೀಜಿ, ಶಾಸಕ ಸಿ.ಎಸ್.ನಾಡಗೌಡ ಅವರಿಂದ ಶಾಖೆ ಉದ್ಘಾಟಿಸಲಾಗಿದೆ. ಸಂಘದ ಸಂಸ್ಥಾಪನೆಯ ಸಮಯದಲ್ಲಿ ತಮ್ಮ ಕೊಡುಗೆ ನೀಡಿದ ಸಮಾಜದ ಹಿರಿಯರನ್ನು ಹಾಗೂ ಎಸ್.ಎಸ್.ಎಲ್.ಸಿ.,ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ರಮೇಶ ಹೆಬ್ಬಾಳ ಮಾತನಾಡಿದರು.ನಿರ್ದೇಶಕರಾದ ಎಸ್.ಬಿ.ಕಲ್ಲುಂಡಿ, ದ್ಯಾವಪ್ಪ ಹುಣಶ್ಯಾಳ, ಮುದ್ದೇಬಿಹಾಳ ಹಾಗೂ ನಾಲತವಾಡ ಶಾಖೆಗಳ ಸಿಬ್ಬಂದಿ ಇದ್ದರು.