ನವದೆಹಲಿ: ಸರ್ಕಾರಿ ಉದ್ಯೋಗ ಮೀಸಲಾತಿ ಯೋಜನೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಬಾಂಗ್ಲಾ ದೇಶದಾದ್ಯಂತ ಭಾರೀ ಹಿಂಸಾಚಾರ ನಡೆಯುತ್ತಿದೆ. ಈ ನಡುವೆ ಇಂದು ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಕ್ಷಣೆಕೋರಿ ಭಾರತಕ್ಕೆ ಬಂದಿದ್ದಾರೆಂದು ವರದಿಯಾಗಿದ್ದು, ಅತ್ತ ಬಾಂಗ್ಲಾದೇಶದ ಅಧಿಕಾರ ಸೇನೆಯ ತೆಕ್ಕೆಗೆ ಸೇರಿದೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಸುದ್ದಿಗೋಷ್ಠಿ ನಡೆಸಿ ವಿಚಾರವನ್ನು ಘೋಷಣೆ ಮಾಡಿದ್ದಾರೆ.
ಶೇಖ್ ಹಸೀನಾ ರಾಜೀನಾಮೆ ನೀಡಿರುವ ಹಿನ್ನೆಲೆ ಸೇನೆಯ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆಯಾಗಲಿದೆ. ಬಾಂಗ್ಲಾದ ಅರಾಜಕತೆ ಅಂತ್ಯಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಭಾರೀ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ರಾಜಧಾನಿಯಿಂದ ಪಲಾಯನ ಮಾಡಿದ್ದಾರೆ. ಇದೀಗ ದೇಶದ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಂಡು ಮಧ್ಯಂತರ ಸರ್ಕಾರವನ್ನು ರಚಿಸುತ್ತೇವೆ. ದೇಶಕ್ಕೆ ಶಾಂತಿಯನ್ನು ಹಿಂದಿರುಗಿಸುತ್ತೇವೆ, ಹಿಂಸಾಚಾರವನ್ನು ನಿಲ್ಲಿಸುವಂತೆ ನಾವು ನಾಗರಿಕರನ್ನು ಕೇಳುತ್ತೇವೆ.
ಕಳೆದ ಕೆಲವು ವಾರಗಳಲ್ಲಿ ನಡೆದ ಎಲ್ಲಾ ಹತ್ಯೆಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಧ್ಯಂತರ ಸರ್ಕಾರವನ್ನು ರಚಿಸಲು ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ. ದೇಶದಲ್ಲಿ ಕರ್ಫ್ಯೂ ಅಥವಾ ಯಾವುದೇ ತುರ್ತು ಪರಿಸ್ಥಿತಿಯ ಅಗತ್ಯವಿಲ್ಲ. ಇಂದು ರಾತ್ರಿಯೊಳಗೆ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ದೇಶ ತೊರೆದಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸುರಕ್ಷತೆಗಾಗಿ ಇದೀಗ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೂಡಲೇ ಬಾಂಗ್ಲಾ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ಶೇಖ್ ಹಸೀನಾ ಅವರು ಭಾರತದ ತ್ರಿಪುರಾದ ರಾಜಧಾನಿ ಅಗರ್ತಲಾಗೆ ಬಂದಿಳಿದ್ದಾರೆ.
ಭಾರತದ ಅಗರ್ತಲಾವು ಬಾಂಗ್ಲಾ ರಾಜಧಾನಿ ಢಾಕಾಗೆ ತೀರ ಹತ್ತಿರವಾದ ನಗರ. ಇಲ್ಲಿಗೆ ಶೇಖ್ ಹಸೀನಾ ತಮ್ಮ ಸಹೋದರಿಯೊಂದಿಗೆ ಬಾಂಗ್ಲಾದೇಶದ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.