ಬೆಂಗಳೂರು: ಸ್ವಪಕ್ಷೀಯರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿ, ಪಕ್ಷಕ್ಕೆ ಸಾಕಷ್ಟು ಮುಜುಗರ ಸೃಷ್ಟಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬಿಜೆಪಿ ವರಿಷ್ಠರು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಬಿ.ವೈ. ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಮೇಲಂತೂ ಯತ್ನಾಳ್ ನಾಲಿಗೆ, ಬಿಎಸ್‌ವೈ ಕುಟುಂಬದ ವಿರುದ್ಧ ಮತ್ತಷ್ಟು ಹರಿತಗೊಂಡಿದೆ. ಯಾವ ಮುಲಾಜು ಇಲ್ಲದೇ ಮನಬಂದಂತೆ ಅವರ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆಯ ಅಧಿವೇಶನದಲ್ಲಿಯೂ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ನಾಯಕರಿಗೆ ಮುಜುಗರ ತರಿಸಿತ್ತು. ಸರ್ಕಾರ, ಯತ್ನಾಳ್ ಹೇಳಿಕೆ ಆಧರಿಸಿ ವಿಪಕ್ಷಗಳನ್ನು ಕೆಣಕಿದವು. ತದನಂತರ ಮಾಧ್ಯಮದ ಎದುರು ರಾಜ್ಯ ಬಿಜೆಪಿಯ ನಾಯಕತ್ವವನ್ನು ಯತ್ನಾಳ್ ಪ್ರಶ್ನಿಸುತ್ತಾ ಇದ್ದಾರೆ.
ಮುಡಾ ಹಗರಣ ಖಂಡಿಸಿ ಮೈಸೂರು ಪಾದಯಾತ್ರೆಯ ನಾಯಕತ್ವದ ಕುರಿತು ಯತ್ನಾಳ್ ಅಪಸ್ವರ ತೆಗೆದು, ಕುಮಾರ ಬಂಗಾರಪ್ಪ ಮನೆಯಲ್ಲಿ ಸಂಗಡಿಗರೊಂದಿಗೆ ಸಭೆ ನಡೆಸಿ, ಪ್ರತ್ಯೇಕವಾಗಿ ಪಾದಯಾತ್ರೆಯನ್ನು ಕೂಡಸಂಗಮದಿಂದ ಬಳ್ಳಾರಿ ವರೆಗೂ ಆಯೋಜಿಸುವ ಬಗ್ಗೆ ಚರ್ಚೆ ಮಾಡಿದ್ದರು.
ಈ ಎಲ್ಲಾ ಬೆಳವಣಿಗಗಳು ರಾಜ್ಯ ನಾಯಕತ್ವದ ಕುರಿತು ಅವರು ಸತತವಾಗಿ ಪ್ರಶ್ನಿಸುತ್ತಿರುವ ಸಂಕೇತ. ಇದೀಗ ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರ ನಾಲಿಗೆಗೆ ಬೀಗ ಹಾಕಲು ಮುಂದಾಗಲಿದೆ ಎನ್ನಲಾಗಿದೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.