ಮುದ್ದೇಬಿಹಾಳ : ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸಾಗವಾನಿ ಕಟ್ಟಿಗೆಯ 25 ಅಡಿ ಎತ್ತರದ ರಥದ ನಿರ್ಮಾಣ ಕಾರ್ಯಕ್ಕೆ ಬುಧವಾರ ದೇವಸ್ಥಾನದ ಕಮೀಟಿಯವರು, ದೈವದವರು ಕೊಪ್ಪಳದಲ್ಲಿ ಚಾಲನೆ ನೀಡಿದರು.
ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ತೇರು ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಕೊಪ್ಪಳದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ನೇತೃತ್ವದಲ್ಲಿರುವ ಎಂ.ಜಿ.ರಥಶಿಲ್ಪಿ ಕಲಾಕೇಂದ್ರದಲ್ಲಿ ತೇರಿನ ಕಟ್ಟಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೇರು ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗವಿಸಿದ್ದೇಶ್ವರ ಮಹಾಸ್ವಾಮಿಯವರು ರಥದ ಲೋಕಾರ್ಪಣೆ ಸಮಾರಂಭದಲ್ಲಿ ಉಪಸ್ಥಿತರಿರಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಮಾತನಾಡಿ, 4 ಏಕಶಿಲೆಯ ಬೃಹತ್ ಚಕ್ರಗಳ ಮೇಲೆ 3 ಪೀಠಗಳುಳ್ಳ 25 ಅಡಿ ಎತ್ತರದ ಭವ್ಯ ತೇರು ಮುಂದಿನ ವರ್ಷ 2025ರ ಶ್ರಾವಣ ಮಾಸಕ್ಕೂ ಮುನ್ನ ಪೂರ್ಣಗೊಳ್ಳಲಿದ್ದು ಶ್ರಾವಣ ಮಾಸದ ಕೊನೆ ಮಂಗಳವಾರ ನಡೆಯಲಿರುವ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ನೂತನ ತೇರನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದರು.
ಗ್ರಾಮದ ಪ್ರಮುಖರಾದ ಶರಣು ಹಿರೇಮಠ,ಶಿವಪ್ಪ ಆರೇಶಂಕರ, ಮಾಜಿ ಸೈನಿಕ ನಾಗಲಿಂಗಯ್ಯ ಮಠ ಶಿವಲಿಂಗಪ್ಪ ಗಸ್ತಿಗಾರ, ಜುಮ್ಮಣ್ಣ ಹಿರೇಕುರುಬರ, ರಾಮಣ್ಣ ಹುಲಗಣಿ ಶಿವನಗೌಡ ಪಾಟೀಲ, ಕರಬಸ್ಸು ಬಿರಾದಾರ, ಎಂ.ಎಂ.ನಾಟೇಕಾರ, ಕಾಸಯ್ಯ ಮಠ, ಶಾಂತಗೌಡ ಬಿರಾದಾರ, ಸೋಮಣ್ಣ ಹೊಸಮನಿ, ಶ್ರೀಶೈಲ ಪಲ್ಲೇದ, ಊರ ದೈವಮಂಡಳಿಯವರು ಉಪಸ್ಥಿತರಿದ್ದರು.