ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ ಹೊರಹೊಮ್ಮುತ್ತಿತ್ತು. ವಿದ್ಯಾರ್ಥಿಗಳ ನೃತ್ಯ, ನಾಟಕ, ರಂಗೋಲಿ, ಛದ್ಮವೇಷ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಜತೆಗೆ ಕಲೆಯನ್ನೂ ಮೇಳೈಸುವಂತೆ ಮಾಡಿದರು.
ಶಾಲಾ ಶಿಕ್ಷಣ ಇಲಾಖೆ, ಎಸ್ ಡಿಎಂಸಿ ಅಧ್ಯಕ್ಷ ಲಕ್ಕಪ್ಪ ನಾಗರಬೆಟ್ಟ ಹಾಗೂ ಲೊಟಗೇರಿ ಗ್ರಾಮಸ್ಥರ ನೇತೃತ್ವದಲ್ಲಿ ಆಯೋಜಿಸಲಾದ ರಕ್ಕಸಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ವಿವಿಧ ಸ್ಪರ್ಧೆಗಳು ನಡೆದವು. ಡಾ.ಗುರುಮೂರ್ತಿ ಕಣಕಾಲಮಠ ಕಾರ್ಯಕ್ರಮ ಉದ್ಘಾಟಿಸಿ ‘ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದರು. ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ ಮಾತನಾಡಿ, ‘ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು’ ಎಂದರು. ಸಿಆರ್ ಪಿ ಮಹಾಂತೇಶ ನೂಲಿನವರ ಮಾತನಾಡಿ ‘ಕಲೋತ್ಸವ ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅಷ್ಟೇ ಅಲ್ಲ ವರ್ಷಂಪ್ರತಿ ಪಾಠಗಳನ್ನು ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ ಎಂದರು.ಟಕ್ಕಳಕಿ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಸಾಧನೆ ಮಾಡಿದರೆ, ಹುನಕುಂಟಿಯ ವಿದ್ಯಾರ್ಥಿನಿ ಅಕ್ಕಮಹಾದೇವಿ, ಸರಸ್ವತಿ ವೇಷದಲ್ಲಿ ಗಮನಸೆಳೆದರು.
ಮುಖ್ಯಗುರುಗಳಾದ ಗಂಗಣ್ಣ ಕಮರಿ, ಎಚ್. ಜಿ. ಗೌರೋಜಿ, ಎ. ಸಿ. ನರಸಲಗಿ, ಯಮನಪ್ಪ ನಾಗಬೇನಾಳ, ಎಸ್. ಎಸ್. ನಾಗರಬೆಟ್ಟ, ಅಧ್ಯಕ್ಷ ಬಿ. ಎಸ್. ಮುದನೂರ, ಎಸ್. ಬಿ. ತೊಗರಿ, ಎಸ್. ಐ. ಗಂಗನಗೌಡ್ರ, ಆರ್. ಎಸ್. ಹಿರೇಮಠ, ಸಂಗಣ್ಣ ಟಕ್ಕಳಕಿ, ಎ. ಪಿ. ಸಿರಗುಂಪಿ, ಲಕ್ಕಪ್ಪ ನಾಗರಬೆಟ್ಟ, ಉಪಸ್ಥಿತರಿದ್ದರು.







