ಮುದ್ದೇಬಿಹಾಳ : ಪಟ್ಟಣದ ಸಾರಿಗೆ ಘಟಕದಲ್ಲಿ ಶೌಚಾಲಯ ನಿರ್ಮಾಣ ಹಾಗೂ ನಿಲ್ದಾಣದ ಆವರಣದಲ್ಲಿ ಕಾಂಕ್ರಿಟ್ ದುರಸ್ತಿಗೆ ೪೦ ಲಕ್ಷ ರೂ.ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಬಿ.ಸುಶೀಲಾ ಹೇಳಿದರು.
ಪಟ್ಟಣದ ಸಾರಿಗೆ ಘಟಕಕಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಗಮದಲ್ಲಿ ಲಭ್ಯ ಅನುದಾನದಲ್ಲಿ ಘಟಕದ ಮೂಲಭೂತ ಸೌರ‍್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಮುದ್ದೇಬಿಹಾಳ ಸಾರಿಗೆ ಘಟಕಕ್ಕೆ ಅಷ್ಟೇ ಅಲ್ಲದೇ ಹೊಸ ಬಸ್‌ಗಳ ಬೇಡಿಕೆ ಇರುವ ಘಟಕಗಳಿಗೆ ಹೊಸದಾಗಿ ಬಸ್ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅನುದಾನದ ಲಭ್ಯತೆ ನೋಡಿಕೊಂಡು ಹೊಸ ಬಸ್‌ಗಳನ್ನು ನೀಡುತ್ತಾರೆ.ಈಚೇಗೆ ವಿಜಯಪುರ ಜಿಲ್ಲೆಯ ನಗರ ಸಾರಿಗೆಗೆ ೨೭ ಬಸ್‌ಗಳನ್ನು ನೀಡಲಾಗಿದೆ.ಮುಂಬರುವ ದಿನಗಳಲ್ಲಿ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೂ ಹೊಸ ಬಸ್‌ಗಳನ್ನು ನೀಡಲಾಗುತ್ತದೆ ಎಂದರು.
ಸೋಲಾಪೂರ,ಪುಣೆ,ವಾಸ್ಕೋ ಮಾರ್ಗದಲ್ಲಿ ರಾತ್ರಿ ಸಂಚರಿಸುತ್ತಿದ್ದ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.ನಿಲ್ದಾಣದ ಡಿಪೋ ನಿರ್ಮಾಣ,ಶುಚಿತ್ವದ ಕುರಿತು ಎಂಡಿ ಅವರು ಘಟಕದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಗ್ಯಾರAಟಿ ಸಮಿತಿ ಉಪಾಧ್ಯಕ್ಷ ಲಕ್ಷö್ಮಣ ಲಮಾಣಿ, ಸದಸ್ಯರಾದ ಸಂಗಣ್ಣ ಮೇಲಿನಮನಿ, ಬುಡ್ಡೇಸಾಬ ಚಪ್ಪರಬಂದ ಮಾತನಾಡಿ, ಘಟಕದಲ್ಲಿ ಸ್ವಚ್ಛತೆ ಕಾಪಾಡಬೇಕು.ನಗರ ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು.ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.
ಕೆಕೆಆರ್‌ಟಿಸಿ ಎಇಇ ಮಲ್ಲಿಕಾರ್ಜುನ ಬಿರಾದಾರ, ಪ್ರಭಾರಿ ಮುಖ್ಯ ಅಭಿಯಂತರ ಚೆನ್ನನಬೋರಯ್ಯ ,ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಹಿರೇಕುರುಬರ,ಘಟಕ ವ್ಯವಸ್ಥಾಪಕ ಅಶೋಕ ಭೋವಿ ಮೊದಲಾದವರು ಇದ್ದರು. ಅಧಿಕಾರಿಗಳಿಗೆ ತರಾಟೆ : ಸಾರಿಗೆ ಘಟಕದ ವೀಕ್ಷಣೆಗೆ ತೆರಳುತ್ತಿದ್ದ ವೇಳೆ ಮಹಿಳೆಯರ ವಿಶ್ರಾಂತಿ ಕೊಠಡಿಗೆ ತೆರಳಿದಾಗ ಶಿಶುಗಳಿಗೆ ಹಾಲುಣಿಸುವ ಕೊಠಡಿಯಲ್ಲಿ ಒಂದು ಖುರ್ಚಿಯೂ ಇಲ್ಲದ್ದನ್ನು ಕಂಡು ಸಾರಿಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಎಂ.ಡಿ ಅವರು, ಸೂಕ್ತ ಸೌಲಭ್ಯಗಳನ್ನು ನಾಗರಿಕರಿಗೆ ಒದಗಿಸುವಂತೆ ತಿಳಿಸಿದರು.ಸ್ವಚ್ಛತಾ ಏಜೆನ್ಸಿದಾರರಿಗೆ ನೋಟಿಸ್ ಜಾರಿ: ಬಸ್ ನಿಲ್ದಾಣದಲ್ಲಿ ದಿನಗೂಲಿ ಮೇಲೆ ಕೆಲಸ ಮಾಡುವವರು ತಮಗೆ ೨೫೦ ರೂ.ದಿನಗೂಲಿ ಪಾವತಿಸಲಾಗುತ್ತಿದೆ ಎಂದು ಎಂ.ಡಿ ಅವರ ಎದುರಿಗೆ ಅಳಲು ತೋಡಿಕೊಂಡಾಗ ಕನಿಷ್ಠ ಕೂಲಿ ಕಾಯ್ದೆ ಅನ್ವಯ ವೇತನ ಪಾವತಿಸದೇ ನಿರ್ಲಕ್ಷö್ಯ ವಹಿಸಿದ ಆರೋಪದ ಮೇಲೆ ಗುತ್ತಿಗೆ ಏಜೆನ್ಸಿಗೆ ನೋಟಿಸ್ ನೀಡಲಾಗುತ್ತದೆ ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಸದಸ್ಯ,ಸಾರಿಗೆ ಘಟಕದ ಅಧಿಕಾರಿ ಮಧ್ಯೆ ವಾಗ್ವಾದ:
ಸಾರಿಗೆ ಘಟಕದ ಸಮಸ್ಯೆಗಳ ಕುರಿತು ಗ್ಯಾರಂಟಿ ಸಮಿತಿ ಸದಸ್ಯ ಬುಡ್ಡೇಸಾಬ ಚಪ್ಪರಬಂದ ಕೆಕೆಆರ್‌ಟಿಸಿ ಎಂ.ಡಿ ಬಿ.ಸುಶೀಲಾ ಅವರಿಗೆ ಮನವರಿಕೆ ಮಾಡಿಕೊಡಲು ಮುಂದಾಗುತ್ತಿದ್ದ ವೇಳೆ ಸಾರಿಗೆ ಘಟಕದ ವ್ಯವಸ್ಥಾಪಕ ಅಶೋಕ ಭೋವಿ ಚಪ್ಪರಬಂದ ಅವರನ್ನು ತಡೆಯಲು ಮುಂದಾಗಿದ್ದನ್ನು ಆಕ್ಷೇಪಿಸಿದ ಚಪ್ಪರಬಂದ ನಾನು ಸಮಸ್ಯೆ ಹೇಳಬೇಡಿ ಎಂದರೆ ಮನೆಗೆ ಹೋಗುತ್ತೇನೆ ಎಂದು ಘಟಕ ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿದರು.ಬಳಿಕ ಇರ್ವರನ್ನೂ ಎಂ.ಡಿ ಅವರೇ ಸಮಾಧಾನ ಮಾಡಿದರು.







