ಶಿವಮೊಗ್ಗ, ಆಗಸ್ಟ್ 04 : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಕರೆ ನೀಡಿದರು
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಸೋಮವಾರ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವಪೂರ್ಣವಾದ ಮಸೂದೆಗಳನ್ನು ಅಂಗೀಕಾರ ಮಾಡಿದೆ. ಅಮೇಜಾನ್, ಸ್ವಿಗ್ಗಿ, ಝೊಮ್ಯಾಟೊ ಬ್ಲಿಂಕ್‌ಇಟ್ ಮುಂತಾದ ಇ ಕಾಮರ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡುವ 5 ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ರಾಜ್ಯದಲ್ಲಿ ಇದ್ದಾರೆ. ಅವರಿಗಾಗಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಗಿಗ್ ಬಿಲ್ ಜಾರಿ ಮಾಡಲಾಗಿದೆ. ಸಹನಟರು, ಟಿಕೆಟ್ ನೀಡುವವರು, ತಂತ್ರಜ್ಞರು, ಪೌರಾಣಿಕ ನಾಟಕಗಳ ನಟರು ಸೇರಿದಂತೆ ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡುವ ಕೆಲಸಗಾರಗಾಗಿ ಸಿನಿ ಬಿಲ್ ಪಾಸ್ ಮಾಡಿದ್ದು, ಶೇ. 1 ರಿಂದ 2 ಸೆಸ್ ಮತ್ತು ಸರ್ಕಾರದ ಹಣ ಸೇರಿಸಿ ಅನುಕೂಲ ಮಾಡಲಾಗಿದೆ. ಹಾಗೂ ಕಮರ್ಷಿಯಲ್ ಡ್ರೈವರ್ ಕ್ಲೀನರ್, ಮೆಕ್ಯಾನಿಕ್ ಇತರೆ ಕಾರ್ಮಿಕರ ಸಾರಿಗೆ ಬಿಲ್ ಪಾಸ್ ಮಾಡಿದ್ದು, ಅಪಘಾತ, ಮರಣ ಅಥವಾ ತೊಂದರೆಯಾದಲ್ಲಿ ರೂ. 5 ಲಕ್ಷ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ತಾಸಿಗೆ 20 ಸಾವಿರ ಮರಣ ಸಂಭವಿಸುತ್ತಿದ್ದು ಪ್ರತಿ ದಿನ 480 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದುಡಿಯುವ ವರ್ಗವೇ ಇದಕ್ಕೆ ಹೆಚ್ಚು ಬಲಿಯಾಗುತ್ತಿರುವ ಕಾರಣ ದೇಶದ ಜಿಡಿಪಿಗೆ ಶೇ.3 ನಷ್ಟವಾಗುತ್ತಿದೆ. ಸಭೆಗಳಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳು ಅಪಘಾತ ಆಗದಂತೆ ಅರಿವು ಮೂಡಿಸಿ, ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಎಂದರು.
20 ಜನರಿಗಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವೆಡೆ ಮಾಲೀಕರು 5 ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಕಡ್ಡಾಯವಾಗಿ ಗ್ರಾಚ್ಯುಟಿ ಪಾವತಿಸಬೇಕು. ಈ ರೀತಿಯ 6 ಸಾವಿರ ಕಂಪೆನಿಗಳು ಇಲಾಖೆಯಡಿ ನೋಂದಣಿಯಾಗಿದ್ದು, ಅಧಿಕಾರಿಗಳು ಗ್ರಾಚ್ಯುಟಿ ಪಾವತಿ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು.
ಎಸ್‌ಸಿ/ ಎಸ್‌ಟಿ ಯವರಿಗೆ ಕೆಲಸ ನೀಡುವ ಖಾಸಗಿ ಸಂಸ್ಥೆ/ಕಂಪೆನಿಗೆ ಕಾರ್ಮಿಕ ಇಇಲಾಖೆಯಿಂದ ಅವರಿಗೆ ಪಾವತಿಸಲು ಶೇ. 50 ಹಣ ನೀಡುವ ದೇಶದಲ್ಲೇ ಪ್ರಪ್ರಥಮ ಯೋಜನೆ ‘ಆಶಾದೀಪ’ ಕಾರ್ಮಿಕರ ಪಾಲಿಗೆ ಆಶಾದೀಪವಾಗಿದೆ. ಇದೇ ಮೊದಲ ಬಾರಿಗೆ ಇಲಾಖೆಯು 91 ಸಣ್ಣ ಸಣ್ಣ ಕೆಲಸ ಮಾಡುವ ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಅಸಂಘಟಿತ ವರ್ಗದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಡೀಸೆಲ್, ಪೆಟ್ರೋಲ್ ಸೆಸ್ ನಲ್ಲಿ ಸ್ವಲ್ಪ ಪಾಲು ನೀಡಿದರೆ ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಸರ್ಕಾರ ರೂ. 56 ಸಾವಿರ ಕೋಟಿಯಿಂದ 60 ಸಾವಿರ ಕೋಟಿವರೆಗೆ ಇದಕ್ಕಾಗಿ ಪ್ರತಿ ವರ್ಷ ವೆಚ್ಚ ಮಾಡುತ್ತಿದೆ. 83 ಸಾವಿರ ಕೋಟಿ ಅಭಿವೃದ್ಧಿಗಾಗಿ ನೀಡಿದೆ. ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳ ಓಡಾಟ ಹೆಚ್ಚಿದೆ. ಶೇ.40 ಹೆಣ್ಣು ಮಕ್ಕಳ ಪ್ರಯಾಣ ಹೆಚ್ಚಿದೆ. ಗ್ಯಾರಂಟಿ ಯೋಜನೆಗಳಡಿ ಬಡವರಿಗೆ ನೀಡುತ್ತಿರುವುದು ಉಳಿತಾಯಕ್ಕಾಗಿ ಅಲ್ಲ. ಆ ಹಣ ಸಂಪೂರ್ಣವಾಗಿ ಮತ್ತೆ ಮಾರುಕಟ್ಟೆಗೆ ವಾಪಸ್ ಬರುತ್ತಿರುವ ಕಾರಣ ರಾಜ್ಯದ ಜಿಡಿಪಿ ಭಾರತದಲ್ಲಿ ನಂ.1 ಕ್ಕೇರಿದೆ.
ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ. ದೇಶದ ಜಿಡಿಪಿ 4ನೇ ಸ್ಥಾನದಲ್ಲಿದೆ. ರಾಜ್ಯದ ತಲಾ ಆದಾಯ ಸರಾಸರಿ ರೂ. 2 ಲಕ್ಷ ಇದೆ. ದೇಶ ಪ್ರಗತಿ ಆಗಬೇಕಾದರೆ ಪ್ರತಿಯೊಬ್ಬರ ಕೈಯಲ್ಲಿ ಹಣ ಬರಬೇಕು. ವಿವಿಧ ದೇಶಗಳ ಅಭಿವೃದ್ದಿ, ಅನ್ವೇಷಣೆ, ಸಂಶೋಧನೆ, ವಿಜ್ಞಾನಗಳ ಬಗ್ಗೆ ಚರ್ಚಿಸಬೇಕು. ಸಮಾಜ ಸುಧಾರಣೆ ನಿಟ್ಟಿನಲ್ಲಿ ಚರ್ಚೆ ಆಗಬೇಕು. ವಿಚಾರಗಳ ಬಗ್ಗೆ ವಿಮರ್ಶೆ ಆದಾಗ ಬದಲಾವಣೆ ಸಾಧ್ಯ. ರೈತರಿಗೆ ಅನುಕೂಲವಾಗುವಂತಹ ನಿರ್ಧಾರಗಳು ಆಗಬೇಕು. ಆನ್‌ಲೈನ್ ಬೆಟ್ಟಿಂಗ್ ನಿಲ್ಲಬೇಕು ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು, ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಚಿವರು ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಮತ್ತು ಮೃತಪಟ್ಟವರ ಅವಲಂಬಿತರಿಗೆ ಚೆಕ್ ವಿತರಿಸಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಸೂಡಾ ಅಧ್ಯಕ್ಷ ಸುಂದರೇಶ್, ಕಾರ್ಮಿಕ ಆಯುಕ್ತರಾದ ಡಾ.ಗೋಪಾಲಕೃಷ್ಣ , ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಎಸ್.ಬಿ ರವಿಕುಮಾರ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳಾದ ಭಾರತಿ, ಜಿ.ಪಂ.ಸಿಇಒ ಹೇಮಂತ್. ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರು, ಜಿಲ್ಲಾ ಕಾರ್ಮಿಕ ಅಧಿಕಾರಿ, ಮುಖಂಡರು, ಕಾರ್ಮಿಕರು, ಸಾರ್ವಜನಿಕರು ಹಾಜರಿದ್ದರು.