
ಬಿಲಾಸ್ಪುರ: ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಮಹಿಳೆಯನ್ನು ಯಾವುದೇ ಕಾರಣಕ್ಕೂ ಬಲವಂತಪಡಿಸುವಂತಿಲ್ಲ ಎಂದು ಛತ್ತೀಸಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ಆಕೆಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ.
ತನ್ನ ಪತಿ ಲೈಂಗಿಕವಾಗಿ ಅಶಕ್ತನಾಗಿದ್ದು (impotent), ಸಹಜೀವನ ನಡೆಸಲು ನಿರಾಕರಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪತಿ, ಅವಳು (ಪತ್ನಿ) ತನ್ನ ಭಾವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಕನ್ಯತ್ವ ಪರೀಕ್ಷೆಗೆ ಒಳಪಡಿಸುವಂತೆ ಕೋರಿದ್ದರು.
ಅರ್ಜಿದಾರರು ತಮ್ಮ ಮೇಲಿನ ಆರೋಪಗಳು ಆಧಾರ ರಹಿತವೆಂದು ಸಾಬೀತುಪಡಿಸಲು ಬಯಸಿದರೆ, ಅವರು ಸಂಬಂಧಪಟ್ಟ ವೈದ್ಯಕೀಯ ಪರೀಕ್ಷೆಗೆ ಒಳಗಾಗಬಹುದು ಅಥವಾ ಯಾವುದೇ ಇತರ ಸಾಕ್ಷಿಗಳನ್ನು ನೀಡಬಹುದು. ಆದರೆ ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದು ಸಂವಿಧಾನ ಬಾಹಿರವಾಗಿದೆ. ಏಕೆಂದರೆ ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ.
ಭಾರತದ ಸಂವಿಧಾನದ 21ನೇ ವಿಧಿಯು ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ ಮಹಿಳೆಯರಿಗೆ ಘನತೆಯಿಂದ ಜೀವನ ನಡೆಸುವ ಹಕ್ಕನ್ನು ಸಹ ಖಾತರಿಪಡಿಸುತ್ತದೆ. ಯಾವುದೇ ಮಹಿಳೆಯನ್ನು ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಬಲವಂತಪಡಿಸುವಂತಿಲ್ಲ. ಸಂವಿಧಾನದ 21ನೇ ವಿಧಿ ‘ಮೂಲಭೂತ ಹಕ್ಕುಗಳ ಹೃದಯ’ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ವರ್ಮಾ ಅವರಿದ್ದ ಪೀಠ ಹೇಳಿದೆ.
ಎರಡೂ ಕಡೆಯವರು (ಪತಿ-ಪತ್ನಿ) ಪರಸ್ಪರ ಮಾಡಿರುವ ಆರೋಪಗಳು ಸಾಕ್ಷ್ಯಾಧಾರಗಳ ವಿಷಯವಾಗಿದೆ. ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರವೇ ತೀರ್ಮಾನಕ್ಕೆ ಬರಬಹುದು ಎಂದು ಕೋರ್ಟ್ ಹೇಳಿದೆ.
2023ರ ಏಪ್ರಿಲ್ 30ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತನ್ನ ಪತಿ ಲೈಂಗಿಕವಾಗಿ ಅಶಕ್ತನೆಂದು ಕುಟುಂಬಸ್ಥರಿಗೆ ಹೇಳಿದ್ದ ಪತ್ನಿ ಆತನೊಂದಿಗೆ ವೈವಾಹಿಕ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಳು.
ಅಲ್ಲದೇ 2024ರ ಜುಲೈ 2ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 144 ರ ಅಡಿಯಲ್ಲಿ ರಾಯಗಢ ಜಿಲ್ಲೆಯ ಕುಟುಂಬ ನ್ಯಾಯಾಲಯದಲ್ಲಿ ₹20,000 ಜೀವನಾಂಶವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು.
ಜೀವನಾಂಶ ಅರ್ಜಿಗೆ ಪ್ರತಿಕ್ರಿಯೆಯಾಗಿ ಪತಿ, ಆಕೆ(ಪತ್ನಿ) ತನ್ನ ಭಾವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಕೋರಿದ್ದರು.
2024ರ ಅಕ್ಟೋಬರ್ 15ರಂದು, ರಾಯಗಢದ ಕೌಟುಂಬಿಕ ನ್ಯಾಯಾಲಯವು ಪತಿಯ ವಿನಂತಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: Death: 10 ಸಾವಿರ ಮಂದಿ ದುರ್ಮರಣ!