ಬೆಂಗಳೂರು: ವಿಶ್ವದ ಬಹುದೊಡ್ಡ ಕ್ರೀಡಾ ಕೂಟ ಒಲಿಂಪಿಕ್ಸ್ ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿದ್ದು, ಭಾರತದ ಕ್ರೀಡಾಪಟುಗಳು ಒಂದೊಂದಾಗಿ ಪದಕಗಳನ್ನು ಗೆದ್ದು ಕೊಡುತ್ತಿದ್ದಾರೆ. ಆದರೆ, ಇದೇ ಸಂದರ್ಭ ರಾಜ್ಯದಲ್ಲಿ ಒಲಿಂಪಿಕ್ಸ್ ವಿಚಾರವನ್ನು ಹಿಡಿದುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜಕಾರಣ ಮಾಡುತ್ತಿವೆ.
ಹಗರಣ, ಭ್ರಷ್ಟಾಚಾರಗಳಲ್ಲಿ ಈ ನಾಯಕರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ಕೊಡಬೇಕೆಂದು ಉಭಯ ಪಕ್ಷಗಳು ಟೀಕೆ ಮಾಡುತ್ತಿವೆ.
ಈ ಬಗ್ಗೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆ ಭ್ರಷ್ಟಾಚಾರದ ಒಲಂಪಿಕ್ಸ್ ನಲ್ಲಿ ಬಿಜೆಪಿಯೇ ನಂ1. ಗೋಲ್ಡು, ಸಿಲ್ವರ್, ಕಂಚು ಎಲ್ಲವೂ ಬಿಜೆಪಿ ಪಾಲು! ಎಂದು ಬರೆದಿದ್ದು, ಅದರೊಂದಿಗೆ ಫೋಟೋವನ್ನು ಬಿಡುಗಡೆ ಮಾಡಿದೆ.
ಫೋಟೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಚಿನ್ನ, ವಿಪಕ್ಷ ನಾಯಕ ಆರ್ ಅಶೋಕ್ ಗೆ ಬೆಳ್ಳಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಂಚಿನ ಪದಕ ಧರಿಸಿರುವ ರೀತಿ ಎಡಿಟ್ ಮಾಡಿ, ಇವರು ಭ್ರಷ್ಟಾಚಾರದ ಒಲಂಪಿಕ್ಸ್ ನಲ್ಲಿ ಹೆಚ್ಚು ಪದಕ ಪಡೆದವರು ಎಂದು ಬರೆದು ಟೀಕಿಸಿದೆ.
ಇತ್ತ, ಬಿಜೆಪಿಯೂ ಕಾಂಗ್ರೆಸ್‌ಗೆ ತಿರುಗೇಟು ನೀಡಿ ಮತ್ತೊಂದು ಫೋಟೋವನ್ನು ಹಂಚಿಕೊಂಡಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಚಿನ್ನ, ಮಾಜಿ ಸಚಿವ ನಾಗೇಂದ್ರ ಬೆಳ್ಳಿ ಹಾಗೂ ಬಸವನಗೌಡ ದದ್ದಲ್ ಕಂಚಿನ ಪದಕ ಧರಿಸಿರುವ ರೀತಿ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಸ್ಕ್ಯಾಮ್ 2024, ₹500 ಕೋಟಿ ಎಂದು ಬರೆದು ಬಿಜೆಪಿ ಟೀಕಿಸಿದೆ.