ಮುದ್ದೇಬಿಹಾಳ : ಕಳೆದ ಒಂದು ವಾರದಿಂದ ತಾಲ್ಲೂಕಿನ ಯರಝರಿ ಗ್ರಾಪಂ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಕಾಡುಪ್ರಾಣಿಯ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿದ್ದು ಅದು ಚಿರತೆಯೇ ಎಂದು ದೃಢಪಟ್ಟಿದೆ.
ತಾಲ್ಲೂಕಿನ ಹಂಡರಗಲ್ ಗ್ರಾಮದ ಹಳ್ಳದಲ್ಲಿ ಶನಿವಾರ ಬೆಳಗ್ಗೆ ಕುರಿ ಮೇಯಿಸಲು ಹೋಗಿದ್ದ ಯರಝರಿ ಗ್ರಾಮದ ಕುರಿಗಾಹಿ ಯಲ್ಲಾಲಿಂಗ ವಾಲೀಕಾರ ಎಂಬುವರ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದೆ. ಇದನ್ನು ಸ್ವತಃ ಯಲ್ಲಾಲಿಂಗ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಕುರಿಗಾಹಿ ಯಲ್ಲಾಲಿಂಗ ಅವರು, ‘ಬೆಳಗ್ಗೆ ಕುರಿಮೇಯಿಸಲು ಹೋದ ವೇಳೆ ಹಳ್ಳದ ಬಳಿ ಚಿರತೆ ಹೋಗಿದ್ದನ್ನು ಕಣ್ಣಾರೆ ಕಂಡಿದ್ದೇನೆ.ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ಮಧ್ಯಮ ಗಾತ್ರದಲ್ಲಿ ಚಿರತೆ ಇದೆ’ ಎಂದು ತಿಳಿಸಿದರು.
ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಗ್ರಾಮಸ್ಥರೊಬ್ಬರು ಚಿರತೆ ನೋಡಿದ್ದಾಗಿ ತಿಳಿಸಿದ್ದಾರೆ. ಅದರ ಸೆರೆಗೆ ಎರಡು ಬೋನುಗಳನ್ನು ಹಳ್ಳದ ದಡದಲ್ಲಿ ಇಡಲಾಗುತ್ತಿದೆ.ಚಿರತೆ ಓಡಾಡಿದ ಜಾಗೆ ಅತ್ಯಂತ ಇಕ್ಕಟ್ಟಾಗಿದ್ದು ಮುಳ್ಳುಕಂಟಿಗಳಿಂದ ಆವೃತವಾಗಿದೆ. ಕಾರ್ಯಾಚರಣೆ ಮುಂದುವರೆಸಿದ್ದೇವೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಚಿರತೆ ಸೆರೆಗೆ ಕಾರ್ಯಚರಣೆ ತೀವ್ರಗೊಳಿಸಲು ಸೂಚನೆ ನೀಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಕಂದಗನೂರು ಗ್ರಾಮದ ಭಾಗದಲ್ಲಿ ಎರಡು ಜಾನುವಾರುಗಳನ್ನು ಕೊಂದಿದ್ದ ಚಿರತೆ ಇದೀಗ ಸ್ಥಳ ಬದಲಿಸಿ ಓಡಾಡುತ್ತಿರುವುದು ಗ್ರಾಮಸ್ಥರ ನಿದ್ದೆಗಡಿಸಿದೆ.ತಾಲ್ಲೂಕು ಆಡಳಿತ ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿವೆ.
ಕಂದಗನೂರು,ನಾಗರಾಳ, ಚಿರ್ಚನಕಲ್, ಹಂಡರಗಲ್ ಭಾಗದಲ್ಲಿ ರೈತರು ಚಿರತೆ ಭೀತಿಯಿಂದ ಹೊಲಗಳಿಗೆ ತಿರುಗಾಡುವುದನ್ನೇ ಬಿಟ್ಟು ಕೂತಿದ್ದಾರೆ. ಆದಷ್ಟು ಬೇಗ ಚಿರತೆಯನ್ನು ಪತ್ತೆ ಹಚ್ಚಬೇಕು ಎಂದು ಹಂಡರಗಲ್ ಗ್ರಾಮದ ಸಾಹೇಬಗೌಡ ಪಟೇಲ್, ಬಸವರಾಜ ನರಸಣಗಿ, ಮುತ್ತು ಕನ್ನೂರ ಆಗ್ರಹಿಸಿದ್ದಾರೆ.