ಮುದ್ದೇಬಿಹಾಳ : ನವೆಂಬರ್ ಒಂದರಂದು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರಧ್ವಜ ದೊಂದಿಗೆ ನಾಡಧ್ವಜವನ್ನು ಆರೋಹಣ ಮಾಡಬೇಕು ಎಂಬ ಆದೇಶ ಇದ್ದರೂ ನಿರ್ಲಕ್ಷ್ಯ ವಹಿಸಿರುವ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಾಲ್ಲೂಕಿನ ಶಿರೋಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿರೋಳ ಗ್ರಾಮದ ಎಚ್.ಪಿ.ಎಸ್.ಶಾಲೆಯ ಆವರಣದಲ್ಲಿ ಶುಕ್ರವಾರ ನಾಡಧ್ವಜಾರೋಹಣ ಮಾಡದೇ ಇರುವುದನ್ನು ಖಂಡಿಸಿ ಶಾಲಾ ಆವರಣದಲ್ಲಿ ನಿಂತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ಸಮಾಜದ ಮುಖಂಡ ರಾಮಣ್ಣ ರಾಜನಾಳ, ಗ್ರಾಪಂ ಸದಸ್ಯ ದ್ಯಾವಪ್ಪ ಹುಣಶ್ಯಾಳ ಮಾತನಾಡಿ, ಇಲ್ಲಿನ ಮುಖ್ಯಶಿಕ್ಷಕರು,ಸಹ ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ.ನಾಡ ಹಬ್ಬ ಇದ್ದರೂ ನಾಡಧ್ವಜವನ್ನು ಆರೋಹಣ ಮಾಡದೇ ಮುಖ್ಯಶಿಕ್ಷಕರು ನಿರ್ಲಕ್ಷ್ಯ ಹಿಸಿದ್ದಾರೆ.ಕೇಳಿದರೆ ನಮ್ಮಲ್ಲಿ ಧ್ವಜಸ್ತಂಭ ಪ್ರತ್ಯೇಕವಾದದ್ದು ಇರಲಿಲ್ಲ ಅದಕ್ಕೆ ಆರೋಹಣ ಮಾಡಿಲ್ಲ ಎಂದು ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ.ನಮಗೆ ಹೇಳಿದ್ದರೆ ಪಂಚಾಯಿತಿಯಿಂದ ಧ್ವಜಸ್ತಂಭ ಕೂಡಿಸುತ್ತಿದ್ದೇವು ಎಂದು ಆರೋಪಿಸಿದರು.
ಗ್ರಾಮದ ಮುಖಂಡರಾದ ನಿಂಗನಗೌಡ ಬಿರಾದಾರ, ಜುಮ್ಮಣ್ಣ ಚಲವಾದಿ, ಮಂಜು ನಾವದಗಿ,ದ್ಯಾಮಣ್ಣ ಗುಡದಿನ್ನಿ, ಬಸ್ಸು ಹುಲಗಬಾಳ, ಮಲ್ಲು ಹೆಬ್ಬಾಳ, ಅಲ್ಲಾಸಾ ಮುದ್ನಾಳ,ಅಡಿಯಪ್ಪ ಮದರಿ, ಸಿದ್ದು ಹೆಬ್ಬಾಳ, ಶಿವು ಶಿರೋಳಕರ , ಹಣಮಂತ ಮಾದರ, ಜಟ್ಟೆಪ್ಪ ನೇಬಗೇರಿ, ಶೇಖಪ್ಪ ಹುಲಗಬಾಳ, ಶಾಂತು ಬಿರಾದಾರ ಮೊದಲಾದವರು ಇದ್ದರು.
ಐಟಿಬಿಟಿ ಶಿಕ್ಷಕರಾಗಿದ್ದಾರೆ-ಬೆಲವಂತ್ರಕAಠಿ
ಶಿರೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರೆಲ್ಲ ಐಟಿಬಿಟಿ ಶಿಕ್ಷಕರಂತೆ ಇದ್ದಾರೆ. ಗ್ರಾಮಸ್ಥರೊಡನೆ ಸರ್ಕಾರದ ಯಾವುದೇ ಕಾರ್ಯಕ್ರಮಗಳಿದ್ದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.ಸಮಯಕ್ಕೆ ಸರಿಯಾಗಿ ಪ್ರಾರ್ಥನೆಗೆ ಬರುವುದಿಲ್ಲ.ತಮಗೆ ತಿಳಿದಾಗ ಶಾಲೆಗೆ ಬಂದು ಬೇಗನೆ ಹೋಗುತ್ತಾರೆ.ಇದರಿಂದ ಶಿರೋಳ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಗ್ರಾಮದ ಯುವ ಮುಖಂಡ ರಮೇಶ ಬೆಲವಂತ್ರಕಂಠಿ ದೂರಿದರು.