ಮುದ್ದೇಬಿಹಾಳ : ಪೂರ್ವದ ಕಾಲದಿಂದಲೂ ಹಿರಿಯರು ನಮ್ಮ ಸಮಾಜದವರು ಯಾರೇ ನಿಧನ ಹೊಂದಿದರೂ ಅವರ ಶವ ಸಂಸ್ಕಾರವನ್ನು ಗ್ರಾಮದ ಬಿರಾದಾರ ಎಂಬುವರ ಜಮೀನಿನಲ್ಲಿ ಮಾಡುತ್ತ ಬಂದಿದ್ದರು.ಆದರೆ ಈಗ ಆ ಜಮೀನಿನ ಮಾಲೀಕರು ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದು ಸರ್ಕಾರದಿಂದ ಮುಸ್ಲಿಂ ಸಮಾಜಕ್ಕೆ ಸ್ಮಶಾನ ಭೂಮಿ ಒದಗಿಸಬೇಕು ಎಂದು ತಾಲ್ಲೂಕಿನ ಶಿರೋಳ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಪದಾಧಿಕಾರಿಗಳು ಈಚೇಗೆ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಮದ ಮುಸ್ಲಿಂ ಸಮಾಜದ ಬಾಂಧವರು ತಹಶೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ರಹಿಮಾನಸಾ ಮುದ್ನಾಳ , ಮುಖಂಡ ಅಬ್ದುಲರಜಾಕ ತಮದಡ್ಡಿ ಮಾತನಾಡಿ, ಗ್ರಾಮದಲ್ಲಿರುವ ಸವಳು ಜವಳು ಜಮೀನಿನಲ್ಲಿ ಸ್ಮಶಾನ ಭೂಮಿ ಹಂಚಿಕೆ ಮಾಡಬೇಕು.ಅಲ್ಲಿ ಬೆಳೆಯೂ ಬರುವುದಿಲ್ಲ.ಸರ್ಕಾರ ಭೂಮಿ ಖರೀದಿ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಅನಾದಿ ಕಾಲದಿಂದಲೂ ನಮ್ಮ ಸಮಾಜದವರ ಹಿರಿಯರ ಗೋರಿಗಳು ಅಲ್ಲಿಯೇ ಇದ್ದು ಶುಕ್ರವಾರ ಹಾಗೂ ಹಬ್ಬದ ದಿನಗಳಲ್ಲಿ ಹಿರಿಯರನ್ನು ಸ್ಮರಿಸುವ ಕಾರ್ಯ ಮಾಡುವ ಮೂಲಕ ಭಾವನಾತ್ಮಕ ಸಂಬAಧ ಉಳಿಸಿಕೊಂಡಿದ್ದೇವೆ.ಅದನ್ನು ಉಳಿಸಿಕೊಡಬೇಕು ಎಂದು ತಹಶೀಲ್ದಾರ್‌ಗೆ ವಿನಂತಿಸಿದರು.
ಗ್ರಾಮದಲ್ಲಿರುವ ಸರ್ಕಾರಿ ಸ್ವಾಮ್ಯದ ಜಮೀನು ರಿ.ಸ.ನಂ 110/1 ರಲ್ಲಿ 1-18 ಎಕರೆ ಇದ್ದು ಅಲ್ಲಿ ಹೊಸ ಸ್ಮಶಾನಕ್ಕೆ ಜಾಗೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. ಕಮೀಟಿಯ ಕಾರ್ಯದರ್ಶಿ ಬಷೀರಹ್ಮದ ತಮದಡ್ಡಿ, ಶೌಕತ್‌ಅಲಿ ತಾರನಾಳ,ಮುಖಂಡ ಎಚ್.ಆರ್.ಬಾಗವಾನ, ಅಬ್ದುಲರಜಾಕ ನದಾಫ, ಚಾಂದಸಾ ನದಾಫ,ಮಹ್ಮದರಫೀಕ ಮುದ್ನಾಳ,ಮುರ್ತುಜಖಾದರ ತಮದಡ್ಡಿ,ಯಾಸೀನ ಮುದ್ನಾಳ ಇದ್ದರು.




