ಧಾರವಾಡ, ಜುಲೈ.21: ಈ ವರ್ಷದ ಮೊದಲನೇ ಕೆಡಿಪಿ ಸಭೆಯಲ್ಲಿ ಇಲಾಖೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಯಲ್ಲಿ ಸಾಧನೆ ಆಗಿರುವುದು ತೃಪ್ತಿ ತಂದಿದೆ. ಇಲಾಖಾವಾರು ಅನುದಾನ ಬಿಡುಗಡೆ, ಬಳಕೆ ಮತ್ತು ಭೌತಿಕ ಗುರಿ ಸಾಧನೆಯನ್ನು ಪರಿಶೀಲಿಸಿ, ಯೋಜನಾ ಅನುಷ್ಠಾನ ಪ್ರಗತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಕ್ರಿಯಾಯೋಜನೆಯನ್ನು ಈಗಿನಿಂದಲೇ ಸಿದ್ದಪಡಿಸಿಕೊಳ್ಳಿ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್.ಲಾಡ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ 2025-26 ನೇ ಸಾಲಿನ ಜುಲೈ 2025 ರ ಅಂತ್ಯಕ್ಕೆ ಸಂಬಂಧಿಸಿದಂತೆ ಮೊದಲನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಲ್ಲಾ ಪಂಚಾಯತ ವಲಯದಲ್ಲಿ ನಿಗದಿತ ಗುರಿಗೆ ಶೇ. 77.30 ರಷ್ಟು ಭೌತಿಕ ಮತ್ತು ಶೇ. 35.47 ರಷ್ಟು ಆರ್ಥಿಕ ಪ್ರಗತಿ ಆಗಿದೆ. ರಾಜ್ಯ ವಲಯದಲ್ಲಿ ನಿಗದಿತ ಗುರಿಗೆ ಶೇ. 96.41 ರಷ್ಟು ಭೌತಿಕ ಹಾಗೂ ಶೇ. 88.09 ರಷ್ಟು ಆರ್ಥಿಕ ಪ್ರಗತಿ ಆಗಿದೆ. ಅದೇ ರೀತಿ ಕೇಂದ್ರ ಪ್ರಾಯೋಜಕತ್ವದ ಯೋಜನೆಗಳ ನಿಗದಿತ ಗುರಿಗೆ ಶೇ. 92.39 ರಷ್ಟು ಭೌತಿಕ ಹಾಗೂ ಶೇ. 94.16 ರಷ್ಟು ಆರ್ಥಿಕ ಪ್ರಗತಿ ಆಗಿದೆ. ಒಟ್ಟಾರೆ ಶೇ. 91.84 ರಷ್ಟು ಭೌತಿಕ ಹಾಗೂ ಶೇ. 86.21 ರಷ್ಟು ಆರ್ಥಿಕ ಪ್ರಗತಿಯಾಗಿದೆ ಎಂದು ವಿವರಿಸಿದರು.
ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ, ಸರ್ಕಾರದ ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು. ರೈತರ ಕೃಷಿ ಸಮಸ್ಯೆಗಳನ್ನು, ಉತ್ತಮ ತಳಿಯ ಬೀಜಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಕೃಷಿ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಅಲ್ಲಿನ ಕೃಷಿ ತಜ್ಞರ, ವಿಜ್ಞಾನಿಗಳ ಅನುಭವವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಇಲಾಖೆಯಿಂದ ರೈತರಿಗೆ ಆಧುನಿಕ ತಂತ್ರಜ್ಞಾನಗಳನ್ನು ಮತ್ತು ಕೃಷಿ ಉಪಕರಣಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ. ಬೂಮ್ ಸ್ಪಿಂಕ್ಲರ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದ್ದಾರೆ. ಅದು ಕಡಿಮೆ ಸಮಯದಲ್ಲಿ ಅತಿ ಬೇಗನೆ ಸ್ಪ್ಲಿಂಕಿಂಗ್ ಕೆಲಸ ಮಾಡುತ್ತದೆ. ಹಾಗೂ ಡ್ರೋನ್ ಮುಖಾಂತರ ಸ್ಪ್ರೇ ಮಾಡಬಹುದು. ಈ ಮಷಿನ್ 15 ನಿಮಿಷದಲ್ಲಿ ಒಂದು ಎಕ್ಕರೆ ಸ್ಪ್ರೇ ಮಾಡುತ್ತದೆ. ಆದ್ದರಿಂದ ಇವುಗಳನ್ನು ವಿಡಿಯೋ ಚಿತ್ರೀಕರಣ ಮಾಡಿ, ಎಲ್ಲ ಗ್ರಾಮಗಳ ಜನರಿಗೆ ತಿಳುವಳಿಕೆ ಮತ್ತು ಮಾಹಿತಿ ನೀಡಲು ಕೃಷಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಕೃಷಿ, ಪಂಚಾಯತ ರಾಜ್, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಎಲ್ಲರೂ ಸಮನ್ವಯದಿಂದ ಕ್ರಿಯಾಯೋಜನೆ ರೂಪಿಸಿ, ಜನರಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು. ಹಾಗೂ ನರೇಗಾದಲ್ಲಿ ನೋಂದಣಿ ಆಗಿರುವ ಜನರು ಕೆಲಸಕ್ಕೆ ಬಾರದೇ ಇದ್ದರೆ, ಅಂತಹವರು ನರೇಗಾ ಕೆಲಸದಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು. ನರೇಗಾ ಯೋಜನೆಯ ಕಾಮಗಾರಿಗಳ ನಿಗದಿತ ಭೌತಿಕ ಗುರಿಯನ್ನು ನಿಯಮಾನುಸಾರ ಕಾಲಮಿತಿಯಲ್ಲಿ ಸಾಧಸಬೇಕೆಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಕಲಘಟಗಿ, ಧಾರವಾಡ, ಹುಬ್ಬಳ್ಳಿ ಭಾಗದ ರೈತರು ಪರ್ಯಾಯ ಬೆಳೆಯಾಗಿ ಅಡಿಕೆ ತೋಟ ಹಾಗೂ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿಗೆ ರೇಷ್ಮೆ ಬೆಳೆ ಹಾಗೂ ರೇಷ್ಮೆ ಹುಳು ಸಾಕಾಣಿಕೆ ಕೃಷಿಯನ್ನು ವಿಸ್ತರಣೆ ಮಾಡಲು ಗ್ರಾಮವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳಗೆ ಸಚಿವರು ನಿರ್ದೇಶಿಸಿದರು
ಅತಿಯಾದ ಮಳೆಯಿಂದಾಗಿ ಗ್ರಾಮಗಳ ಮುಖ್ಯ ರಸ್ತೆಗಳು ಹಾಗೂ ಸಂಪರ್ಕ ಸೇತುವೆ, ರಸ್ತೆಗಳು ಹಾಳಾಗಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣ ಅವುಗಳನ್ನು ದುರಸ್ತಿ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ, ಶೂನ್ಯ ಫಲಿತಾಂಶ ಮತ್ತು ಶೂನ್ಯ ವಿದ್ಯಾರ್ಥಿ ದಾಖಲಾತಿ ಹೊಂದಿರುವ ಶಾಲೆಗಳಿಗೆ ನೋಟಿಸ್ ನೀಡಿ, ನಿಯಮಾನುಸಾರ ಬಂದ್ ಮಾಡಬೇಕು. ಅಲ್ಲಿನ ಸಿಬ್ಬಂದಿಗಳನ್ನು ಸಿಬ್ಬಂದಿ ಅಗತ್ಯವಿರುವ ಸರ್ಕಾರಿ ಶಾಲೆಗಳಿಗೆ ತಕ್ಷಣ ವರ್ಗಾಯಿಸಬೇಕು. ಇದರಿಂದ ಸರ್ಕಾರದ ಅನುದಾನದ ಅಪವ್ಯಯ ತಪ್ಪುತ್ತದೆ. ಕಳೆದ ಎರಡು ವರ್ಷಗಳಿಂದ ಈ ಕುರಿತು ಗಂಭೀರ ಕ್ರಮ ವಹಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಧೋರಣೆ ವಿರುದ್ಧ ಕೋಪಗೊಂಡ ಸಚಿವರು ತಕ್ಷಣ ಕ್ರಮವಹಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಜಿಲ್ಲಾ ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.