ಕುಳಗೇರಿ ಕ್ರಾಸ್: ಮನೆಯ ಮುಂದೆ ತಗಡಿನ ಚಾಟಿನಲ್ಲಿ ಮಲಗಿದ್ದ ಹಸುವಿನ ಕೆಚ್ಚಲಿನ ಒಂದು ಮೊಲೆಯನ್ನು ಕೊಯ್ದ ಘಟನೆ ಗ್ರಾಮದ ಮೇಟಿಯವರ ಬಡಾವಣೆಯಲ್ಲಿ ನಡೆದಿದೆ.
ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದ್ದು ಬೆಳಗಿನ ಜಾವ ಹಸುವಿನ ಮಾಲಿಕ ಕೊಟ್ಟಿಗೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಗರ್ಭಾವಸ್ಥೆಯಲ್ಲಿರುವ ಹಸುವಿನ ಕೆಚ್ಚಲಿನ ಒಂದು ಮೊಲೆ ಕೊಯ್ದು ಪಾಪಿಗಳು ವಿಕೃತಿ ಮೆರೆದಿದ್ದಾರೆ. ಸದ್ಯ ಹಸು ರಕ್ತ ಸ್ರಾವದಿಂದ ನರಳಾಡಿದ್ದು ಸ್ಥಳೀಯ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲಾಗಿದೆ.
ನೋವು ತೋಡಿಕೊಂಡ ಹಸುವಿನ ಮಾಲಿಕರು: ಈ ಆಕಳು ಒಬ್ಬಿಬ್ಬರಿಗೆ ಅಸಗೋಳಲ್ಲ ನಾಲ್ಕೈದು ಜನ ಮೂಗುದಾರ ಹಿಡಿದು ಈ ಕೃತ್ಯ ನಡೆಸಿರಬಹುದು ಎಂದು ಹಸುವಿನ ಮಾಲಿಕ ಬರಮಪ್ಪ ಬಸಪ್ಪ ಕುರಿ ಪತ್ರಿಕೆಗೆ ತಿಳಿಸಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಗ್ರಾಮದ ಜನರು ಭೇಟಿ ನೀಡುತ್ತಿದ್ದು ಪಾಪಿಗಳ ಈ ಕೃತ್ಯಕ್ಕೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಪೂಜಿಸುವ ಗೋಮಾತೆ ದೇವರ ಸಮಾನ. ಆದರೆ ಹಾಲು ಕೊಡುವ ಗೋವಿನ ಕೆಚ್ಚಲು ಕೊಯ್ದು ಪಾಪದ ಕೆಲಸ ಮಾಡಿದ್ದಾರೆ. ಈ ದುಷ್ಕೃತ್ಯ ಎಸಗಿದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅಂಗನವಾಡಿ ನಿವೃತ್ತ ಶಿಕ್ಷಕಿ ವೆಂಕಮ್ಮ ಕಲಬಾಶೆಟ್ಟಿ ಕೃತ್ಯವನ್ನು ಖಂಡಿಸಿದ್ದಾರೆ.