ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಎಂಜೀನಿಯರ್ ಆಗಬೇಕು ಎಂಬ ಆಸೆ ಇಟ್ಟುಕೊಂಡು ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ, ಉತ್ತಮ ಭವಿಷ್ಯ ರೂಪಿಸಲು ಹಲವಾರು ಕನಸುಗಳನ್ನು ಕಟ್ಟಿಕೊಂಡು ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿಗೆ ಭಾನುವಾರ ಆಗಮಿಸಿದ್ದ ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಪಾಲಕರಿಗೆ ಭಾನುವಾರ ನಿರಾಸೆ ಅನುಭವಿಸಬೇಕಾಯಿತು.
ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಟ್ಯಾಲೆಂಟ್ ಸರ್ಚ್ ಪರೀಕ್ಷೆ ನಿಜವಾಗಲೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ರೂಪಿಸಿದ ಪರೀಕ್ಷೆಯೋ ಅಥವಾ ಕಾಲೇಜಿನ ಪ್ರಚಾರಕ್ಕೆಂದು ರೂಪಿಸಿದ ಕಾರ್ಯಕ್ರಮವೋ ಎಂಬುದು ಗೊತ್ತಾಗಲಿಲ್ಲ ಎಂದು ದಾವಣಗೆರೆಯಿಂದ ಬಂದಿದ್ದ ಪಾಲಕರೊಬ್ಬರು ದೂರಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 3555 ವಿದ್ಯಾರ್ಥಿಗಳು, ಅವರೊಂದಿಗೆ ಪಾಲಕರು ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕಾಲೇಜಿನಿಂದ ಮುಂಚಿತವಾಗಿ ಪ್ರಕಟಣೆ ಕೊಟ್ಟಂತೆ ನಿಗದಿತ ಶೇ.ವಾರು ಅಂಕ ಪಡೆದುಕೊಳ್ಳುವಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ವೈಫಲ್ಯತೆ ಅನುಭವಿಸಿದರು.
ಫಲಿತಾಂಶ ಪ್ರಕಟಿಸುವ ಸಮಯದಲ್ಲಿ ಆರಂಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್, 3555 ವಿದ್ಯಾರ್ಥಿಗಳಲ್ಲಿ ಕೇವಲ ನಾಲ್ವರಿಗೆ ಎರಡು ವರ್ಷದ ಉಚಿತ ಊಟ, ವಸತಿ,ಶಿಕ್ಷಣ ನೀಡುವುದಾಗಿ ಹೇಳಿ ಹುನಗುಂದ ಆರ್.ಎಂ.ಎಸ್.ಎ ಶಾಲೆಯ ಮಲ್ಲಿಕಾರ್ಜುನ ಕತನಿ(ಶೇ.58.33),ಶಹಾಪೂರಿನ ನಿಸರ್ಗ ಪೊಲೀಸಪಾಟೀಲ (ಶೇ.49.58),ಮುಂಡರಗಿ ಆರ್.ಎಂ.ಎಸ್.ಎ ಶಾಲೆಯ ಕಾವ್ಯಾ ಉಪ್ಪಾರ (ಶೇ.46.66), ಆತನೂರು ಆರ್.ಎಂ.ಎಸ್.ಎ ಶಾಲೆಯ ನಾಗೇಶ ಬಡಿಗೇರ(ಶೇ.46.25) ಅವರ ಹೆಸರುಗಳನ್ನು ಘೋಷಿಸಲಾಯಿತು.
ಇದಾದ ಬಳಿಕ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್ ಮತ್ತೆ ಮಧ್ಯೆಪ್ರವೇಶಿಸಿ, ಫಲಿತಾಂಶ ಪ್ರಕಟಿಸುತ್ತಿದ್ದ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ ಅವರಿಂದ ಅತೀ ಹೆಚ್ಚು ಅಂಕ ಪಡೆದ ಮೊದಲ 16 ವಿದ್ಯಾರ್ಥಿಗಳ ಹೆಸರುಗಳನ್ನು ಘೋಷಿಸಿದರು.ಅಲ್ಲದೇ ಅವರಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿಯೂ ತಿಳಿಸಿದರು.ಆದರೆ ಎಷ್ಟು ರಿಯಾಯಿತಿ ಕೊಡಲಾಗುತ್ತದೆ ಎಂಬುದನ್ನು ಬಹಿರಂಗವಾಗಿ ಹೇಳಲಿಲ್ಲ.ಒಟ್ಟಾರೆ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಋಣಾತ್ಮಕ ಅಂಕಗಳನ್ನು ಇಟ್ಟಿದ್ದು ಹಾಗೂ ಪ್ರಶ್ನೆಗಳು ಅತೀ ಕಠಿಣವಾಗಿದ್ದರಿಂದಲೇ ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.ಸಂಸ್ಥೆಯವರಿAದ ಇದೊಂದು ಪ್ರಚಾರದ ಗಿಮಿಕ್ ಆಯಿತೇ ? ಎಂಬ ಮಾತುಗಳು ಪರೀಕ್ಷೆಗೆ ದೂರದ ಧಾರವಾಡ, ಬಾಗಲಕೋಟ,ವಿಜಯಪುರ,ಯಾದಗಿರಿ,ಕೊಪ್ಪಳ, ಗದಗ, ಗಂಗಾವತಿ ಭಾಗಗಳಿಂದ ಬಂದಿದ್ದ ಪೋಷಕರಿಂದ ಕೇಳಿ ಬಂದವು.