ಮುದ್ದೇಬಿಹಾಳ : ಅತೀವೃಷ್ಟಿಯಿಂದ ಹಾನಿಯಾದ ಬೆಳೆಗೆ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರವನ್ನು ರೈತರಿಗೆ ಕೊಡುವುದನ್ನು ಬಿಟ್ಟು ಬೆಳೆ ಹಾನಿ ಅಂದಾಜು ಜಂಟಿ ಸಮೀಕ್ಷೆ ಹೆಸರಿನಲ್ಲಿ ನಡೆಸಿರುವ ‘ಡ್ರಾಮಾ’ ಕೈಬಿಟ್ಟು ವಾಸ್ತವ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ 30 ಸಾವಿರ ರೂ.ಪರಿಹಾರ ರೈತರಿಗೆ ಒದಗಿಸಬೇಕು ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ತಾಲ್ಲೂಕಿನ ಇಂಗಳಗೇರಿ, ಮಡಿಕೇಶ್ವರ, ಢವಳಗಿ, ರೂಢಗಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಬೆಳೆ ಹಾನಿಯಾಗಿರುವ ಕುರಿತು ಸರ್ಕಾರದ ಅಧಿಕಾರಿಗಳು ಜಂಟಿ ಸಮೀಕ್ಷೆಯ ವರದಿಯನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳೆ ಹಾನಿ ಸಂಭವಿಸಿದ ರೈತರ ಜಮೀನುಗಳಲ್ಲಿ ಹಾನಿ ಉಂಟಾದ ಪ್ರಮಾಣವನ್ನು ಜಂಟಿ ಸಮೀಕ್ಷೆಯ ಹೆಸರಿನಲ್ಲಿ ಸರ್ಕಾರ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಪಂಚಾಯಿತಿವಾರು ಸಮೀಕ್ಷೆ ವರದಿಯನ್ನು ಅವಲೋಕಿಸಿದರೆ ಕೆಲವೇ ರೈತರಿಗೆ ಪರಿಹಾರವನ್ನು ಕೊಡುವ ಕಾರ್ಯ ಸರ್ಕಾರದಿಂದ ಮಾಡಲಾಗುತ್ತಿದೆ. ಇಂಗಳಗೇರಿ ಪಂಚಾಯಿತಿಯಲ್ಲಿ 188, ಮಡಿಕೇಶ್ವರ ಗ್ರಾಪಂನಲ್ಲಿ 128, ಢವಳಗಿ ಗ್ರಾಪಂನಲ್ಲಿ 68 ರೈತರ ಹೆಸರು ಬೆಳೆಹಾನಿ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಭಾಗದಲ್ಲಿ ತೊಗರಿ, ಹತ್ತಿ, ಈರುಳ್ಳಿ, ಬಾಳೆ ಮೊದಲಾದ ಬೆಳೆಗಳು ಶೇ75ರಷ್ಟು ಹಾನಿ ಉಂಟಾಗಿದೆ. ಆದರೆ, ಆಯ್ದ ರೈತರಿಗೆ ಅದರಲ್ಲೂ ಎರಡು ಎಕರೆ ಮೀರದಂತೆ ಹಾನಿ ಸಂಭವಿಸಿರುವುದಾಗಿ ಪಟ್ಟಿಯಲ್ಲಿ ಅಧಿಕಾರಿಗಳು ತೋರಿಸಿದ್ದಾರೆ. ಕೆಲವು ರೈತರ ಜಮೀನುಗಳಲ್ಲಿ ಭಾಗಶಃ ಹಾನಿ ಸಂಭವಿಸಿದ್ದರೂ ಅದಕ್ಕೆ 2 ಎಕರೆ ಒಳಗಡೆ ಮಿತಿ ವಿಧಿಸಿರುವುದು ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಎಲ್ಲೋ ಕೂತು ತಮಗೆ ಬೇಕಾದ ರೈತರ ಹೆಸರುಗಳನ್ನು ಆಯ್ಕೆ ಮಾಡಿ ಪಟ್ಟಿ ಲಗತ್ತಿಸಿ ಆಕ್ಷೇಪಣೆ ಆಹ್ವಾನಿಸಿದ್ದಾರೆ. ಕೆಲವು ರೈತರಿಗೆ ಪಂಚಾಯಿತಿಯಲ್ಲಿ ಪಟ್ಟಿ ಅಂಟಿಸಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಹೇಳಿದರು.
ಮಡಿಕೇಶ್ವರ ಗ್ರಾಮದಲ್ಲಿ ರೈತ ತುಂಬಗಿ ಮಾತನಾಡಿ, ನಮ್ಮದು 5 ಎಕರೆ ಜಮೀನಿನಲ್ಲಿ ಹತ್ತಿ ಬಿತ್ತಿದ್ದೇವು. ಅತೀವೃಷ್ಟಿಯಿಂದ ಬೆಳೆಗೆ ತಾಮ್ರ ರೋಗ ಬಂದಿದೆ. ಬೆಳೆ ಸಂಪೂರ್ಣ ಹಾನಿಯಾಗಿದ್ದು ಅದಕ್ಕಾಗಿ ಎಕರೆಗೆ 30-40 ಸಾವಿರ ರೂ.ಖರ್ಚು ಮಾಡಿದ್ದೇವೆ. ಈಗ ಪಂಚಾಯಿತಿಯಲ್ಲಿ ಹಚ್ಚಿರುವ ಲೀಸ್ಟ್ ನಲ್ಲಿ ನಮ್ಮ ಹೆಸರಿಲ್ಲ ಎಂದು ಹೇಳಿದರು.
ಬಳವಾಟ ಭಾಗದ ರೈತ ಕಾರ್ತಿಕ ಯಾಳವಾರ ಮಾತನಾಡಿ, ನಮ್ಮ ಹೊಲದಲ್ಲಿ ತೊಗರಿ ಬೆಳೆ ಗಿಡಗಳು ಹುಲುಸಾಗಿ ಬೆಳೆದಿದ್ದು ಬಿಟ್ಟರೆ ಹೂವು ಬಿಟ್ಟಿಲ್ಲ, ಕಾಯಿಗಟ್ಟಿಲ್ಲ, ಬುಡದಲ್ಲಿ ಹಸಿಯಾಗಿದ್ದು ಯಾವ ಅಧಿಕಾರಿಗಳು ಈವರೆಗೂ ನಮ್ಮ ಹೊಲಗಳಿಗೆ ಭೇಟಿ ನೀಡಿಲ್ಲ ಎಂದು ದೂರಿದರು.
ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮಲ್ಲಯ್ಯ ಬಿರಾದಾರ,ಮಧುಸ್ವಾಮಿ ಹಿರೇಮಠ, ಅನೀಲ ರಾಠೋಡ, ಲಕ್ಷ್ಮಣ ಬಿಜ್ಜೂರ, ಸಂಗಣ್ಣ ಹತ್ತಿ, ನಾಗೇಶ ಕವಡಿಮಟ್ಟಿ, ಪ್ರವೀಣ ಚಿನಿವಾರ ಮೊದಲಾದವರು ಇದ್ದರು.
ಅಧಿಕಾರಿಯಿಂದ ಸಿಗದ ಸಮರ್ಪಕ ಉತ್ತರ : ಢವಳಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೋವಿಂದರೆಡ್ಡಿ ಮೆದಕಿನಾಳ ಅವರನ್ನು ಕರೆಯಿಸಿ ರೈತರ ಸಮಸ್ಯೆಯನ್ನು ಅವರ ಸಮಕ್ಷಮದಲ್ಲಿ ನಡಹಳ್ಳಿ ಅವರು ಬಹಿರಂಗಪಡಿಸಿದರು. ಕೆಲವು ರೈತರು ನಾವು ಬೆಳೆ ವಿಮೆ ತುಂಬಿದ್ದರೂ ನಮ್ಮ ಜಮೀನು ಹಾನಿಯಾದ ರೈತರ ಪಟ್ಟಿಯಲ್ಲಿ ಬಂದಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಗೋವಿಂದರೆಡ್ಡಿ ಮೆದಿಕಿನಾಳ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭಿಸಿದ್ದೇವೆ. ನಾಲ್ಕು ದಿನ ಬೆಳೆ ಹಾನಿ ಸಮೀಕ್ಷೆಗೆ ಹೋಗಿದ್ದೇವು. ಕೆಲವು ರೈತರ ಜಮೀನುಗಳಿಗೆ ಭೇಟಿ ನೀಡಿ ವರದಿ ತಂದಿದ್ದೇವೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ನಾನು ಹೋದರೆ ಇಲ್ಲಿ ಬೀಜ ವಿತರಣೆಗೆ ಸಿಬ್ಬಂದಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಆದರೆ, ಹಾನಿ ಅಂದಾಜನ್ನು ಹೇಗೆ ಗಣನೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಲಿಲ್ಲ. ಅಲ್ಲದೇ ಎರಡು ಎಕರೆಗಿಂತ ಕಡಿಮೆ ಪ್ರಮಾಣದಲ್ಲಿಯೇ ಹಾನಿ ತೋರಿಸಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೂ ಅವರಿಂದ ಉತ್ತರ ದೊರೆಯಲಿಲ್ಲ.
9 ಹೆಕ್ಟೆರ್ ಬೆಳೆ ಹಾನಿ…! : ತೋಟಗಾರಿಕೆ ಇಲಾಖೆ ಅಧಿಕಾರಿ ರೈತರು ಬೆಳೆ ಹಾನಿ ಆಗಿದೆ ಎಂದು ಅರ್ಜಿ ಕೊಟ್ಟರೆ ಮಾತ್ರ ಸಮೀಕ್ಷೆ ಮಾಡಲು ಬರುತ್ತಾರಂತೆ. ಜಿಲ್ಲಾಧಿಕಾರಿಗಳೇ ರೈತರ ಜಮೀನಿಗೆ ಹೋಗಿ ಸಮೀಕ್ಷೆ ಮಾಡಲು ತಿಳಿಸಿದ್ದರೂ ಅದಕ್ಕೆ ಯಾವುದೇ ಸ್ಪಂದನೆ ಕೆಳ ಹಂತದ ಅಧಿಕಾರಿಗಳಿಂದ ದೊರೆಯುತ್ತಿಲ್ಲ. ಢವಳಗಿ ಭಾಗದಲ್ಲಿ ಕೇವಲ 9 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿ ಆಗಿದೆ ಎಂದು ವರದಿ ನೀಡಲಾಗಿದೆ. ಇಂತಹ ಅವೈಜ್ಞಾನಿಕ ಸಮೀಕ್ಷೆಯಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ಗ್ರಾಮಗಳಲ್ಲಿ ಡಂಗೂರ ಸಾರಿಸಿ ಹಾನಿಗೊಳಗಾದ ರೈತರಿಂದ ಅರ್ಜಿಗಳನ್ನು ಪಡೆದುಕೊಳ್ಳಬೇಕು. ರೈತರು ಕಾನೂನು ಕೈಗೆ ತೆಗೆದುಕೊಂಡರೆ ಅದಕ್ಕೆ ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ.
ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ