ಮುದ್ದೇಬಿಹಾಳ: ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅನ್ನ ನೀಡುವ ಕೆಲಸ ಮಾಡಬೇಕೇ ಹೊರತೂ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ವ್ಯರ್ಥ ಹಾಳು ಮಾಡಬಾರದು ಎಂದು ಪಟ್ಟಣದ ಮಹಾಮನೆ ಬಳಗದ ಅಧ್ಯಕ್ಷ ಬಸವರಾಜ ಕೋರಿ ಹೇಳಿದರು.
ಅವರು ಶನಿವಾರ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ತೋರಣ ಬಳಗದಿಂದ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ ಬಸವ ಪಂಚಮಿಯ “ಹಾಲು ಕುಡಿಯುವ ಹಬ್ಬ”ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಲಿನ ನಾಗರಕ್ಕೆ ಹಾಲೆರೆಯುವುದನ್ನು 12 ನೇ ಶತಮಾನದಲ್ಲಿ ಬಸವಾದಿ ಶರಣರು ಖಂಡಿಸಿ ಚಳುವಳಿ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಅಮೂಲ್ಯವಾದ ಹಾಲು, ಸಮತೋಲನ ಆಹಾರವಾಗಿದೆ. ಪೌಷ್ಟಿಕಾಂಶ, ಖನಿಜಗಳನ್ನು ಹೊಂದಿರುವ ಹಾಲನ್ನು ಕಲ್ಲಿಗೆ ಹಾಕದೇ ನಾವು ಕುಡಿದರೆ ದೇಹ ಶಕ್ತಿ ಪಡೆಯುತ್ತದೆ ಎಂದರು. ಹಸಿರು ತೋರಣ ಬಳಗದ ಅಧ್ಯಕ್ಷರಾದ ಬಿ.ಎಚ್.ಬಳಬಟ್ಟಿ ಮಾತನಾಡಿ, ಪೌಷ್ಟಿಕಾಂಶಗಳ ಕೊರತೆಯಿಂದ ಮಕ್ಕಳು, ಬಾಣಂತಿಯರು ಸಾವನ್ನಪ್ಪಿದ ವರದಿ ಓದುತ್ತಿದ್ದೇವೆ. ಅಮೂಲ್ಯವಾದ ಹಾಲನ್ನು ಕಲ್ಲಿಗೆ ಎರೆಯದೇ ಅದನ್ನು ಎಲ್ಲರೂ ಕುಡಿದು ಆರೋಗ್ಯವಂತರಾಗಬೇಕೆಂದರು.
ಹತೋಗೆಬ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗವು ಪರಿಸರ ಸಂರಕ್ಷಣೆ ಜೊತೆ ಜೊತೆಯಲ್ಲಿಯೇ ಸಮಾಜದಲ್ಲಿ ಬೇರೂರಿರುವ ಮೌಢ್ಯಗಳನ್ನು ಕಡಿಮೆ ಮಾಡಲು ಮತ್ತು ಆಹಾರದ ಮಹತ್ವ ಸಾರುವ ಕೆಲಸ ಮಾಡುತ್ತಿದೆ ಎಂದರು. ಬಳಗದ ಮಾಜಿ ಅಧ್ಯಕ್ಷರಾದ ರವಿ ಗೂಳಿ ಮಾತನಾಡಿ, ಸಮಾಜದಲ್ಲಿ ಮನೆ ಮಾಡಿರುವ ಅನಿಷ್ಟಗಳು, ಮೂಢ ನಂಬಿಕೆಗಳು ಕ್ರಮೇಣ ಕಡಿಮೆ ಆಗುತ್ತ ನಡೆದಿವೆ ಎಂದರು.
ಡಾ.ವೀರೇಶ ಇಟಗಿ ಮಾತನಾಡಿ, ಹಾಲು ಹಲವು ಪೌಷ್ಟಿಕಾಂಶಗಳಿಂದ ಕೂಡಿದ್ದು, ಅದನ್ನು ವ್ಯರ್ಥ ಮಾಡಬಾರದು ಎಂದರು. ವೇದಿಕೆಯಲ್ಲಿ ಹತೋಗೆಬ ಕಾರ್ಯದರ್ಶಿ ಅಮರೇಶ ಗೂಳಿ, ಗಣ್ಯರಾದ ರಾಮು ಪೂಜಾರಿ, ಮಾಜಿ ಅಧ್ಯಕ್ಷರಾದ ಕೆ. ಆರ್. ಕಾಮಟೆ, ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ಗೌರವಾಧ್ಯಕ್ಷ ಜಿ.ಎಂ.ಹುಲಗಣ್ಣಿ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಮುಖ್ಯ ಗುರುಗಳಾದ ಚಿನ್ನಪ್ಪ ಬಿ. ಚಿತ್ತರಗಿ, ಬಿ. ಎಂ. ಪಲ್ಲೇದ, ಸುರೇಶ ಕಲಾಲ, ರವಿ ತಡಸದ, ಡಾ.ವಿಜಯಕುಮಾರ ಗೂಳಿ, ವೀರೇಶ ಹಂಪನಗೌಡ್ರ, ಡಾ. ಚಂದ್ರಶೇಖರ ಶಿವಯೋಗಿಮಠ, ವಿರುಪಾಕ್ಷಿ ಪತ್ತಾರ, ವಿಶ್ವನಾಥ ಪಾಟೀಲ, ಶಿಕ್ಷಕರಾದ ಸರೋಜಾ ಕಿತ್ತೂರು, ಶಾರದಾ ಮಹಾಂತನವರ, ರಾಜೇಶ್ವರಿ ಜಂಗೀನ, ಅಕ್ಕಮಹಾದೇವಿ ಕುರಜೋಗಿ, ಗೀತಾ ಕೋಳೂರ ಸೇರಿದಂತೆ ಹಸಿರು ತೋರಣ ಬಳಗದ ಸದಸ್ಯರಿದ್ದರು.
ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು. ಸರೋಜಾ ಕಿತ್ತೂರು ವಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.