ಬೆಳಗಾವಿ(ಸುವರ್ಣ ವಿಧಾನಸೌಧ ): ಕಾರ್ಯನಿರತ ಪತ್ರಕರ್ತರ ಸಂಘಟನೆಯವರು ಮುಂದಿರಿಸಿರುವ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದು ಈಡೇರಿಸಲು ಕ್ರಮ ಜರುಗಿಸುವುದಾಗಿ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಬೆಳಗಾವಿ ವಿಧಾನಸೌಧದ ಎದುರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಹೋರಾಟದ ಸ್ಥಳಕ್ಕೆ ಆಗಮಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರೊಂದಿಗೆ ಮಾತುಕತೆ ನಡೆಸಿದರು.
ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ,ಪತ್ರಕರ್ತರ ಹಿತರಕ್ಷಣಾ ಕಾಯ್ದೆ ಜಾರಿ, ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಜಾರಿಗೊಳಿಸಿರುವ ಉಚಿತ ಬಸ್ ಪಾಸ್ ವಿತರಣೆಗೆ ವಿಧಿಸಿರುವ ಮಾನದಂಡಗಳನ್ನು ಸಡಿಲಿಸುವುದು, ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿ ಭರ್ತಿ, ಟೋಲ್ ನಾಕಾಗಳಲ್ಲಿ ಪತ್ರಕರ್ತರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಿಎಂ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ನಾನು ಮನವಿ ಸ್ವೀಕರಿಸಲು ಬಂದಿದ್ದೇನೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಸಂಬಂಧಿಸಿದ ಸಚಿವರುಗಳ ಗಮನಕ್ಕೆ ತಂದು ಈಡೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷ ಅಶೋಕ ರಾಠೋಡ, ಕಾರ್ಯಾಧ್ಯಕ್ಷ ಇರ್ಫಾನ್ ಬೀಳಗಿ, ರಾಜ್ಯ ಪದಾಧಿಕಾರಿಗಳಾದ ಬಸವರಾಜ ಸಿರಸಂಗಿ, ಎಸ್.ಎಸ್.ಪಾಟೀಲ, ಜಿಗಳೂರು ಲಕ್ಷ್ಮಣರಾವ್, ಜಾನ್ಸನ್ ಗೋಡೆ, ಎಂ.ಇಸಾಕ್, ಮಂಜುಳಾ.ಬಿ., ನಿಡಗುಂದಿ ಕಾನಿಪ ಧ್ವನಿ ತಾಲ್ಲೂಕು ಅಧ್ಯಕ್ಷ ರಾಜಶೇಖರ ಹಿರೇಮಠ, ಮುದ್ದೇಬಿಹಾಳ ಧ್ವನಿ ಸದಸ್ಯ ರವಿ ದಂಡಿನ್, ವೀರೇಶ ಮೇಟಿ ಮೊದಲಾದವರು ಇದ್ದರು.
ವರದಿ: ಶಂಕರ ಹೆಬ್ಬಾಳ, ಮುದ್ದೇಬಿಹಾಳ ಕಾನಿಪ ಧ್ವನಿ ಅಧ್ಯಕ್ಷರು







