ಮುದ್ದೇಬಿಹಾಳ : ಮಾದಕ ವಸ್ತುಗಳ ವ್ಯಸನದಿಂದ ಆರೋಗ್ಯ ಹಾಳಾಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥರಾಗಿ ಸಮಾಜದಲ್ಲೂ ಕೆಟ್ಟ ಹೆಸರು ತಂದುಕೊಳ್ಳಬೇಕಾಗುತ್ತದೆ ಎಂದು ಸಿಪಿಐ ಮೊಹ್ಮದ ಫಸಿವುದ್ದೀನ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಸಾಗಣೆ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾನ್ಸರ್ ಅಂತಹ ಮಾರಕ ಕಾಯಿಲೆ ಮಾದಕ ವಸ್ತುಗಳಿಂದ ಬರುತ್ತದೆ. ಮಾನವನಿಗೆ ದೈಹಿಕ ನ್ಯೂನ್ಯತೆ ತರುತ್ತದೆ. ನಶೆ ತರುವ ಪದಾರ್ಥಗಳತ್ತ ವಿದ್ಯಾರ್ಥಿಗಳು ಕಣ್ಣು ಹಾಯಿಸಬೇಡಿ ಎಂದರು.
ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಮಾದಕ ವಸ್ತುಗಳ ವಿದ್ಯಾರ್ಥಿ ಜೀವನದಲ್ಲಿ ಅವರ ಭವಿಷ್ಯವನ್ನೇ ಹಾಳು ಮಾಡುತ್ತವೆ. ಅಂತಹ ದುರಭ್ಯಾಸಗಳಿಂದ ದೂರವಿರುವುದು ಒಳಿತು ಎಂದರು.
ಡಾ.ಸತೀಶ ತಿವಾರಿ, ತಾಪಂ ಅಧಿಕಾರಿ ಪಿ.ಎಸ್.ಕಸನಕ್ಕಿ, ಬಿಇಒ ಬಿ.ಎಸ್.ಸಾವಳಗಿ, ಅಕ್ಷರ ದಾಸೋಹ ಅಧಿಕಾರಿ ಎಂ. ಎಂ. ಬೆಳಗಲ್, ಪಿಎಸ್‌ಐ ಸಂಜಯ ತಿಪರೆಡ್ಡಿ, ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಎಂ. ಎಸ್. ಕವಡಿಮಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲೆಗಳ ಮುಖ್ಯಗುರುಗಳು ಇದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಕುರಿತು ಜಾಗೃತಿ ಜಾಥಾ ನಡೆಸಿದರು.