ಮುದ್ದೇಬಿಹಾಳ : ಅಧಿಕಾರಕ್ಕಾಗಿ ನಾನು ಪಕ್ಷನಿಷ್ಠೆ ಬದಲಿಸುವ ಜಾಯಮಾನ ನನ್ನದಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ ಎಂದು ಮಾಜಿ ಶಾಸಕ ನಡಹಳ್ಳಿಗೆ ಶಾಸಕ ಸಿ. ಎಸ್. ನಾಡಗೌಡ ಪ್ರತ್ಯುತ್ತರ ನೀಡಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಬಡವಾಗಿಲ್ಲ. ಈ ವರ್ಷ 53 ಸಾವಿರ ಕೋಟಿ ರೂ., ಮುಂದಿನ ವರ್ಷ 60 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರವೇ ಜಿಡಿಪಿಯಲ್ಲಿ ರಾಜ್ಯದ ಸ್ಥಾನಮಾನದ ಕುರಿತು ಹೆಮ್ಮೆ ವ್ಯಕ್ತಪಡಿಸಿದೆ. ಜಿಡಿಪಿಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿ ಇದೆ ಎಂದರು.
ಎರಡು ವರ್ಷದಲ್ಲಿ ಹಣ ನಾನು ಎಷ್ಟು ಹಣ ತಂದಿದ್ದೇನೆ. ಬಿಜೆಪಿ ಸರ್ಕಾರದ ಕೊನೆಯ ವರ್ಷದಲ್ಲಿ ಆರ್ಥಿಕ ಶಿಸ್ತು ಎಷ್ಟಿತ್ತು. ಜನರಿಗೆ ಉಪಯೋಗಕಾರಿ ಕೆಲಸಗಳನ್ನು ಕೈಗೊಳ್ಳುವ ಬದಲು ಸ್ವಹಿತದ ಕೆಲಸಗಳನ್ನೇ ಆಯ್ಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ 1.20 ಲಕ್ಷ ಕೋಟಿ ರೂ.ಬಾಕಿ ಹೊರೆ ಹೊರೆಸಿದ್ದಾರೆ ಎಂದು ಆರೋಪಿಸಿದರು.
ಕೆರೆ ತುಂಬುವ ಯೋಜನೆಗೆ ನೀಲನಕ್ಷೆ ಸಿದ್ದಪಡಿಸಿದ್ದು ಖರ್ಗೆ, ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲರು ಕೊನೆಯ ಹಳ್ಳಿಗಳಿಗೆ ನೀರು ತಲುಪಿಸುವುದಕ್ಕೆ ಬೇಕಾದ ಯೋಜನೆ ರೂಪಿಸುವ ಜೊತೆಗೆ ಬೇಸಿಗೆಯಲ್ಲಿ ರೈತರಿಗೆ ಸಮಸ್ಯೆಯಾಗಬಾರದು ಎಂದು ಕೆರೆ ತುಂಬುವ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.
ಬೂದಿಹಾಳ ಪೀರಾಪೂರ ಯೋಜನೆ ಕಾಂಗ್ರೆಸ್ ಮಾಡಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವವರು ನಡೆದಿರುವ ಕೆಲಸಗಳನ್ನು ಗಮನಿಸಲಿ. ಅಮೃತ .2 ಯೋಜನೆಯಡಿ 14 ಕೋಟಿ ಕೆಲಸಕ್ಕೆ ಟೆಂಡರ್ ಮುಗಿದಿದೆ.ಮುದ್ದೇಬಿಹಾಳ ಮೆಗಾಮಾರ್ಟ್ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 5 ಕೋಟಿ ಬಿಡುಗಡೆ ಮಾಡಲಾಗಿದೆ. ಮುದ್ದೇಬಿಹಾಳ, ತಾಳೀಕೋಟಿ, ನಾಲತವಾಡ ಪಟ್ಟಣಗಳ ಅಭಿವೃದ್ಧಿಗೆ 20 ಕೋಟಿ ರೂ. ಸಿ.ಎಂ ಅಭಿವೃದ್ಧಿ ಅನುದಾನದಲ್ಲಿ ನೀಡಲಾಗಿದೆ. ಮುದ್ದೇಬಿಹಾಳ ಆರೋಗ್ಯ ಕೇಂದ್ರದ ದುರಸ್ತಿಗೆ 1.70 ಕೋಟಿ ನೀಡಲಾಗಿದೆ. ಶಿರಾಡೋಣ ಲಿಂಗಸೂರು ರಸ್ತೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಆಯ್ದ ಸ್ಥಳಗಳಲ್ಲಿ ಅಭಿವೃದ್ಧಿ ಪಡಿಸಲು ಹಣ ಬಿಡುಗಡೆ ಮಾಡಿದೆ. ಲೋಕೋಪಯೋಗಿ ಇಲಾಖೆಯಡಿ ವಿಜಯಪುರ ದಿಂಡವಾರ ರಸ್ತೆ ಅಭಿವೃದ್ಧಿಗೆ ಕೆಶಿಪ್ ಅಡಿ 300ಕೋಟಿ ಅನುದಾನ ನಿಗದಿಗೊಳಿಸಲಾಗಿದೆ ಎಂದು ಶಾಸಕರು ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ಹಂಚಿಕೊಂಡರು.
ತಮ್ಮ ಅಧಿಕಾರ ಅವಧಿಯಲ್ಲಿ ಒಂದಾದರೂ ಮೊರಾರ್ಜಿ ಸ್ಕೂಲ್ ತಂದಿದ್ದಾರೆಯೇ ಎಂದು ನಡಹಳ್ಳಿ ಅವರನ್ನು ಪ್ರಶ್ನಿಸಿದ ನಾಡಗೌಡರು, ಇಣಚಗಲ್‌ನಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಆರಂಭಿಸಲಾಗಿದೆ. ಕಂಪೌಂಡಗೆ 2 ಕೋಟಿ ಬಿಡುಗಡೆ ಮಾಡಲಾಗುವುದು. ಬಿದರಕುಂದಿ ಆರ್‌ಎಂಎಸ್‌ಎ ಶಾಲೆಯನ್ನು 8.65 ಕೋಟಿಯಲ್ಲಿ ಕಟ್ಟಿಸಲಾಗಿದೆ. ಸರೂರ ರೇವಣಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನದ ಅಭಿವೃದ್ಧಿಗೆ 4 ಕೋಟಿ ನೀಡಲಾಗಿದೆ. ಯಲಗೂರು ದೇವಸ್ಥಾನದ ಅಭಿವೃದ್ಧಿಗೆ 2 ಕೋಟಿ ನೀಡಲಾಗಿದೆ. ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿ ರಿಪೇರಿಗೆ 4 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು ಹೊಸದಾಗಿ ನವೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ನಾಡಗೌಡರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡ ವಾಯ್. ಎಚ್. ವಿಜಯಕರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳರ ಇದ್ದರು.
ಹಸಿರು ಶಾಲು ಹಾಕಿಕೊಂಡು ರೈತರನ್ನೇ ಮರೆತಿದ್ದೀರಿ, ನಿಮ್ಮ ಅಧಿಕಾರವಧಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ ತಂದು ಆರಂಭಿಸಬಹುದಿತ್ತು. ಯಾಕೆ ಕೇವಲ ಹಸಿರು ಶಾಲು ಹಾಕಿಕೊಂಡು ರೈತನ ಮಗ ಎನ್ನುತ್ತಿರಲ್ಲ ರೈತರಿಗೆ ಅನುಕೂಲ ಮಾಡಿಕೊಡಬಹುದಾಗಿತ್ತಲ್ಲ. ಯಾಕೆ ಮಾಡಿಲ್ಲ ಎಂದು ನಡಹಳ್ಳಿ ಅವರ ಹೆಸರು ಪ್ರಸ್ತಾಪಿಸದೇ ನಾಡಗೌಡರು ಪ್ರಶ್ನಿಸಿದರು.