ಹುಬ್ಬಳ್ಳಿ ಆ. 17: ಸ್ವಾತಂತ್ರ್ಯ ಪೂರ್ವದಲ್ಲಿ ಶೇ 20 ರಿಂದ 25 ರಷ್ಟು ಸಾಕ್ಷರತೆ ಇತ್ತು. ಇಂದು ಶೇ 75 ರಷ್ಟು ಸಾಕ್ಷರತೆ ಸಾಧಿಸಲಾಗಿದೆ. ಶೇ. 87 ರಷ್ಟು ಯುವಕರಿಗೆ ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ದೇಶದಲ್ಲಿರುವ ಪರಿಸ್ಥಿತಿಯನ್ನು ಇದ್ದ ಹಾಗೆ ಹೇಳಬೇಕು. ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನರು ಮುಂದಾಗಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು ತಿಳಿಸಿದರು.
ಛಬ್ಬಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ನೂತನ ಸರಕಾರಿ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬದಲಾವಣೆ ಆಗಬೇಕಿದ್ದರೆ ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ ಅವರ ಮಾರ್ಗದಲ್ಲಿ ನಾವು ಕೂಡ ಸಾಗಬೇಕಿದೆ. ಎಲ್ಲರಿಗೂ ಸಮಪಾಲು ಸಮಬಾಳು ಸಿಗಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು. ದೇಶದ ಏಕತೆ ಎಂದೂ ಅಳಿಯುವುದಿಲ್ಲ ಎಂದರು.
ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಹೆತ್ತ ತಂದೆ ತಾಯಿಯನ್ನು ಮೊದಲು ಗೌರವಿಸಬೇಕು. ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕಾಗುತ್ತದೆ. ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸುಮಾರು 40 ವರ್ಷದ ಬಳಿಕ ಛಬ್ಬಿ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣ ಮಾಡಲಾಗಿದೆ. ವಿಶೇಷ ಕಾಳಜಿ ಮೂಲಕ ಗ್ರಾಮಕ್ಕೆ ಪ್ರೌಢಶಾಲೆ ಬಂದಿದೆ. ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆಗಳು ಜಾಸ್ತಿ ಶಬ್ಧ ಮಾಡಬೇಕು. 6500 ಗ್ರಾಮ ಪಂಚಾಯತಿಗಳಿಗೆ ಒಂದು ಕೆಪಿಎಸ್ ಶಾಲೆ ಸ್ಥಾಪನೆ ಆಗಬೇಕು. 4,000 ಶಾಲೆಗಳಿಗೆ ದ್ವಿಭಾಷೆ ಅಳವಡಿಸಲಾಗುತ್ತಿದೆ. 5,000 ಎಲ್ ಕೆಜಿ, ಯುಕೆಜಿ ಶಾಲೆ ತೆರೆಯಲಾಗುವುದು. 25 ಸಾವಿರ ಮಕ್ಕಳಿಗೆ ಉಚಿತವಾಗಿ ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಸಕರಾದ ಎಂ.ಆರ್.ಪಾಟೀಲ್, ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರ, ಚಲನಚಿತ್ರ ನಟಿ ಸಪ್ತಮಿ ಗೌಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಲ್ಯಾಬ್ ಅನ್ನು ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೆ.ಬಿ.ಮಜ್ಜಗಿ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಛಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಹುಲ್ಲಂಬಿ, ಸದಸ್ಯರು, ಪಿಡಿಒ ಚಂದ್ರಶೇಖರ ಪೂಜಾರಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.