ಹುನಗುಂದ: ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠದ ಹೇಳಿದರು.
ಪಟ್ಟಣ ವಿಜಯ ಮಹಾಂತೇಶ ವೃತ್ತದಲ್ಲಿನ ಗುರವಾರ ವಿಜಯ ಮಹಾಂತೇಶ್ವರ ಮೂರ್ತಿಗೆ ಪುಷ್ಪಾರ್ಪಣೆ ನೆರವೇರಿಸಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶ್ರೀಗಳು ತಮ್ಮ ಜೋಳಿಗೆಯನ್ನು ಹಿಡಿದು ಗ್ರಾಮ, ನಗರ ಸೇರಿದಂತೆ ರಾಜ್ಯಾದ್ಯಂತ ಸಂಚಾರ ನಡೆಸಿದ್ದರು. ಯುವಕರು ಸಾರ್ವಜನಿಕರು ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಮುಕ್ತಿ ಪಡೆದಿದ್ದರು. ಶ್ರಮದಿಂದ ಸಾವಿರಾರು ಜನ ಮದ್ಯಪಾನ ತ್ಯಜಿಸಿದ್ದರು, ಸಮಾಜ ಸೇವೆ ಕಂಡ ರಾಜ್ಯ ಸರಕಾರ ಅವರ ಜನ್ಮದಿನವಾದ ಆ.೧ ರಂದು ವ್ಯಸನಮುಕ್ತ ದಿನವಾಗಿ ಘೋಷಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಮಹಾಂತೇಶ ತೆಗ್ಗಿನಮಠ, ಸುರೇಶ ಹಳಪೇಟಿ, ಗಂಗಣ್ಣ ಇಲಕಲ್ಲ, ನಾರಾಯಣ ಕುಡಕುಂಟಿ,ರಾಮನಗೌಡ ಬೆಳ್ಳಿಹಾಳ, ಮಹಾಂತೇಶ ಚಿತ್ತವಾಡಗಿ, ಮಲ್ಲಣ್ಣ ಹೂಗಾರ, ಮಹಾಲಿಂಗಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.