ಮುದ್ದೇಬಿಹಾಳ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಒಳಮೀಸಲಾತಿ ಐಕ್ಯತೆ ಸಮೀತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೈಕ್ ಜಾಗೃತಿ ರ‍್ಯಾಲಿ ಸಮಾರೋಪ ಹಾಗೂ ಬೃಹತ್ ಪ್ರತಿಭಟನಾ ರ‍್ಯಾಲಿ ಬುಧವಾರ ನಡೆಸಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದರು.ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ತಮಟೆ ಬಾರಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಮುಖಂಡ ಹರೀಶ ನಾಟೀಕಾರ , ಒಳಮೀಸಲಾತಿ ಐಕ್ಯತೆ ಸಮೀತಿ ಸಂಚಾಲಕ ತಿಪ್ಪಣ್ಣ ದೊಡಮನಿ ಮಾತನಾಡಿ, ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳ ವಿವೇಚನೆಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸುವ ಅಧಿಕಾರ ಇದೆ ಎಂಬ ತೀರ್ಪು ಕೊಟ್ಟಿದ್ದರೂ ಈವರೆಗೂ ಒಳಮೀಸಲಾತಿ ಜಾರಿಗೊಳಿಸುವುದಕ್ಕೆ ಸಿಎಂ ಸಿದ್ಧರಾಮಯ್ಯನವರು ಕಾಲಹರಣ ಮಾಡುತ್ತಿದ್ದಾರೆ.ಪರಿಶಿಷ್ಟ ಸಮುದಾಯಗಳಿಂದ ಮಂತ್ರಿ, ಶಾಸಕರಾದವರು ಒಳಮೀಸಲಾತಿ ಬಗ್ಗೆ ಧ್ವನಿ ಎತ್ತುತ್ತಿಲ್ಲ.ಎಲ್ಲಿ ಧ್ವನಿ ಎತ್ತಿದರೆ ತಮ್ಮ ಹೆಂಡತಿ,ಮಕ್ಕಳಿಗೆ ರಾಜಕೀಯ ಭವಿಷ್ಯ ಸಿಗುವುದಿಲ್ಲವೋ ಎಂದು ಬಾಯಿಮುಚ್ಚಿಕೊಂಡಿದ್ದು ಮುಂಬರುವ ದಿನಗಳಲ್ಲಿ ಅಂಥವರ ವಿರುದ್ಧವೇ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲ ಕೆ.ಬಿ.ದೊಡಮನಿ ಮಾತನಾಡಿ,ಪರಿಶಿಷ್ಟ ಜಾತಿಯವರ ಮತಗಳನ್ನು ಪಡೆದುಕೊಂಡು ಶಾಸಕರಾಗಿರುವ ಸಿ.ಎಸ್.ನಾಡಗೌಡರು ಈವರೆಗೂ ಒಳಮೀಸಲಾತಿ ಬಗ್ಗೆ ಮಾತನಾಡಿಲ್ಲ.ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ನಾಡಗೌಡರಿಂದಾಗಬೇಕು ಎಂದು ಒತ್ತಾಯಿಸಿದರು.ಕೇವಲ ನಾಡಗೌಡರಷ್ಟೇ ಅಲ್ಲ ರಾಜ್ಯ 224 ಶಾಸಕರೂ ಒಳಮೀಸಲಾತಿ ಸೌಲಭ್ಯದ ಕುರಿತು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಚಿತ್ರದುರ್ಗದ ಕೋಡಿಹಳ್ಳಿ ಸ್ವಾಮೀಜಿ ಮಾತನಾಡಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಹೋರಾಟಗಾರರಾದ ಡಿ.ಬಿ.ಮುದೂರ, ಚೆನ್ನಪ್ಪ ವಿಜಯಕರ್, ಪ್ರಕಾಶ ಚಲವಾದಿ,ನಿಡಗುಂದಿಯ ಹೋರಾಟಗಾರ ತಿಪ್ಪಣ್ಣ ವಂದಾಲ,ಬಲಭೀಮ ನಾಯ್ಕಮಕ್ಕಳ, ಬಾಲಚಂದ್ರ ಹುಲ್ಲೂರ ಮೊದಲಾದವರು ಮಾತನಾಡಿದರು.
ಪ್ರಮುಖರಾದ ಬಸವರಾಜ ಪೂಜಾರಿ, ಯಮನಪ್ಪ ಹಂಗರಗಿ, ವಕೀಲ ಎಸ್.ಎಚ್.ಲೊಟಗೇರಿ, ಮೌನೇಶ ಮಾದರ, ಮಾರುತಿ ಸಿದ್ದಾಪೂರ, ದೇವರಾಜ ಹಂಗರಗಿ, ರವಿ ಬಸರಕೋಡ ಮೊದಲಾದವರು ಪಾಲ್ಗೊಂಡಿದ್ದರು.
ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ಹಾಗೂ ಸಿಬ್ಬಂದಿ ಭದ್ರತೆ ಉಸ್ತುವಾರಿ ವಹಿಸಿದ್ದರು.