ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಹೇಳಿದರು.
ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ”ದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಅಸಂಘಟಿತ ವಲಯಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ 101 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದೆ. ರಾಜ್ಯದ
25,45,607 ಹಾಗೂ ಜಿಲ್ಲೆಯ 1,17,313 ಕಾರ್ಮಿಕರನ್ನು ಈ ಯೋಜನೆಗೆ ನೋಂದಾಯಿಸಿ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜೊಮ್ಯಾಟೋ, ಸ್ವಿಗ್ಗಿ, ಫ್ಲಿಪ್‍ಕಾರ್ಟ್ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗಾಗಿ 2 ಲಕ್ಷ ರೂ.ಗಳ ಅಪಘಾತ ಪರಿಹಾರ ಹಾಗೂ ಜೀವವಿಮಾ ಸೌಲಭ್ಯ ಸೇರಿದಂತೆ 4 ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸುವ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಹೊಸದಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರಾಜ್ಯದ 30256 ಕಾರ್ಮಿಕರು ಹಾಗೂ ಜಿಲ್ಲೆಯ 809 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ವಾಹನ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳಿಗಾಗಿ ಜಾರಿಗೆ ತಂದಿರುವ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 98 ಅಪಘಾತ ಪ್ರಕರಣಗಳಲ್ಲಿ 4.22 ಕೋಟಿ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆಯಲ್ಲದೆ, 74 ವಿದ್ಯಾರ್ಥಿಗಳಿಗೆ 7.40ಲಕ್ಷ ರೂ.ಗಳ ಶೈಕ್ಷಣಿಕ ಧನ ಸಹಾಯವನ್ನು ಪಾವತಿಸಲಾಗಿದೆ. ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ 2 ಲಕ್ಷ ರೂ.ಗಳ ಅಪಘಾತ ಪರಿಹಾರ ಹಾಗೂ 1ಲಕ್ಷ ರೂ.ಗಳವರೆಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯಡಿ ಈವರೆಗೆ ರಾಜ್ಯದಲ್ಲಿ 6047 ಹಾಗೂ ಜಿಲ್ಲೆಯಲ್ಲಿ 173 ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿ 40ಲಕ್ಷ ಕಾರ್ಮಿಕರು ಇರುವ ಬಗ್ಗೆ ಅಂದಾಜಿಸಲಾಗಿದ್ದು, ಇವರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನೋಂದಣಿ ಮಾಡಿಕೊಳ್ಳಲು ಪೋರ್ಟಲ್ ಸೃಜಿಸಲಾಗಿದ್ದು, ಅರ್ಹ ಅಸಂಘಟಿತ ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾದ ಅರ್ಹ ಕಾರ್ಮಿಕರಿಗೆ ಇಲಾಖೆಯಿಂದ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಗುವುದು ಎಂದು
ತಿಳಿಸಿದರು.
ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಬದ್ಧವಾಗಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ರಿಂದ 15 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಮಾತನಾಡಿ, ಕಾರ್ಮಿಕ ಸಂಘಟನೆಗಳು ಸಾಮರಸ್ಯದಿಂದ ಒಗ್ಗಟ್ಟಾಗಿರಬೇಕು. ಯಾವುದೇ ಸಂಘಟನೆಗಳು ರಾಜಕೀಯ ಪ್ರವೇಶ ಮಾಡಬಾರದು. ಇದರಿಂದ ಸಂಘಟನೆಗಳ ನಡುವೆ ಒಡಕುಂಟಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಲವಾರು ಪ್ರಥಮಗಳು: ರಾಜ್ಯದ ಕಾರ್ಮಿಕ ಸಚಿವರಾಗಿ ಸಂತೋಷ್ ಎಸ್. ಲಾಡ್ ಅವರು ಅಧಿಕಾರವಹಿಸಿಕೊಂಡ ಮೇಲೆ ಕಾರ್ಮಿಕ ವಲಯದಲ್ಲಿ ರಾಜ್ಯ ಗಿಗ್ ಕಾರ್ಮಿಕರ ಯೋಜನೆ, ಆಶಾ ದೀಪ ಯೋಜನೆ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಸೇರಿದಂತೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಹಲವಾರು ಪ್ರಥಮಗಳಿಗೆ ನಾಂದಿ ಹಾಡಿದ್ದಾರೆ. ಸರ್ಕಾರ ನೀಡಿರುವ ಕಾರ್ಮಿಕ ಖಾತೆಯನ್ನು ಜವಾಬ್ದಾರಿ ಹಾಗೂ ಕ್ರಿಯಾಶೀಲವಾಗಿ ನಿಭಾಯಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಕಾರ್ಮಿಕ ಕಲ್ಯಾಣಕ್ಕೆ ಹಣದ ಕೊರತೆಯಿಲ್ಲ : ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ವೆಚ್ಚ ಮಾಡಲು ಸರ್ಕಾರದಲ್ಲಿ ಯಾವುದೇ ಹಣದ ಕೊರತೆಯಿಲ್ಲ. ಸುಮಾರು 5000 ಕೋಟಿ ರೂ.ಗಳ ಹಣ ಕಾರ್ಮಿಕ ಸಚಿವರ ಖಾತೆಯಲ್ಲಿ ಲಭ್ಯವಿದೆ ಎಂದರಲ್ಲದೆ, ಕಾರ್ಮಿಕ ಸಮುದಾಯದಲ್ಲಿ ಶೇ.90ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರ ಶ್ರೇಯೋಭಿವೃದ್ಧಿಗಾಗಿ ಜಾರಿ ಮಾಡಿರುವ ಯೋಜನೆಗಳನ್ನು ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರಲ್ಲದೆ, ಕೇಂದ್ರದ ಮೊದಲ ಕಾರ್ಮಿಕ ಸಚಿವ ಡಾ: ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿ, ದುಡಿಮೆ ಸಮಯ ನಿಗದಿ, ಕೆಲಸ ಮಾಡುವ ಸ್ಥಳದಲ್ಲಿ ಮೂಲಭೂತ ಸೌಲಭ್ಯ ಹಾಗೂ ಉತ್ತಮ ವಾತಾವರಣ ಒದಗಿಸಲು ಹೋರಾಟ ನಡೆಸಿ ಸಾಂವಿಧಾನಿಕ ಕಾನೂನನ್ನು
ಜಾರಿಗೆ ತಂದರು ಎಂದು ಸ್ಮರಿಸಿದರು.
ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್ ಗೌಡ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಆಯಕ್ತ ಡಾ: ಹೆಚ್.ಎನ್. ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತ ಡಾ: ಎಸ್.ಬಿ. ರವಿಕುಮಾರ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್.
ರವಿಕುಮಾರ್, ಸಹಾಯಕ ಕಾರ್ಮಿಕ ಆಯುಕ್ತ ಬಿ.ಇ. ಶಿವಕುಮಾರ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜು, ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿತಿನ್ ರಾಜ್ ಮೌರ್ಯ, ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಕುಮಾರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಜಿ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಭಾಗವಹಿಸಿದ್ದರು.