ತನ್ನನ್ನು ಪರಿವರ್ತಿಸಿಕೊಳ್ಳುವುದೇ ನಿಜವಾದ ಧರ್ಮ-ಕೊಪ್ಪಳ ಶ್ರೀ
ಮುದ್ದೇಬಿಹಾಳ : ಮನುಷ್ಯ ಸಂತೋಷವಾಗಿ ಬದುಕಲು ಅನ್ನ, ಆಶ್ರಯ, ಅರಿವೆ ಬೇಕು. ಅದರ ಜೊತೆಗೆ ನಾನು ಈ ಭೂಮಿಯ ಮೇಲೆ ಹೇಗೆ ಬದುಕುಬೇಕು ಎಂಬ ಅರಿವು ಇಟ್ಟುಕೊಂಡು ಬದುಕುಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕುಂಟೋಜಿಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ನೂತನ ರಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಅರಿವಿಲ್ಲದೇ ಬದುಕಬಾರದು,ಜ್ಞಾನ ತಿಳಿವಳಿಕೆ ಇಲ್ಲದ ಬದುಕು ಅಲ್ಲಿ ದುಃಖ,ಚಿಂತೆ ಮನೆ ಮಾಡುತ್ತದೆ. ಮನೆಯಲ್ಲಿ ಸೊಳ್ಳೆಯನ್ನು ಓಡಿಸಲು ಗುಡನೈಟ್ ಹಚ್ಚಿದಂತೆ ಬದುಕಿನಲ್ಲಿ ಕೆಟ್ಟ ವಿಚಾರಗಳು ಹೋಗುವುದಕ್ಕೆ ಗುಡಲೈಫ್ ಹಚ್ಚಬೇಕು. ಇಲ್ಲಿ ಯಾರಿಗೆ ಯಾರೂ ಬದಲಾವಣೆ ಮಾಡುವುದಿಲ್ಲ. ಜಗತ್ತಿನಲ್ಲಿ ತನ್ನನ್ನು ತಾನೇ ಪರಿವರ್ತನೆಯೇ ನಿಜವಾದ ಧರ್ಮವಾಗಿದೆ ಎಂದು ಹೇಳಿದರು.
ಮನಸ್ಸನ್ನು ಒಳ್ಳೆಯ ವಿಷಯಗಳಿಂದ ತುಂಬಿಸಿಕೊಳ್ಳಬೇಕು. ಸುಖ ದುಃಖದ ಪರಿಕಲ್ಪನೆಗಳು ಬೇರೆಲ್ಲೂ ಇಲ್ಲ. ನಮ್ಮಲ್ಲಿಯೇ ಇದೆ. ಕಲ್ಲು ಒಡೆಯುವವನ ಕೈಗೆ ಸಿಕ್ಕರೆ ಕಂಕರ ಆಗುತ್ತದೆ. ಶಿಲ್ಪಿ ಕೈಯ್ಯಲ್ಲಿ ಕೊಟ್ಟರೆ ಅದು ಶಂಕರ ಆಗುತ್ತದೆ. ಕಲ್ಲಿನಲ್ಲಿ ಏನೂ ಇಲ್ಲ. ಕಲ್ಲನ್ನು ರೂಪಿಸುವವನ ಕೈಯ್ಯಲ್ಲಿ ಅದು ಕಂಕರ, ಶಂಕರ ಆಗುವ ಶಕ್ತಿ ಹೊಂದಿದೆ ಎಂದರು.
ದೇವನ ಮನೆಯಲ್ಲಿರುವ ನಾವು ದೇವರಿಗೆ ಮನೆಯನ್ನು ಕಟ್ಟಿದ್ದೇವೆ ಎಂದು ಹೇಳುತ್ತ ತಿರುಗುತ್ತೇವೆ. ಭೂಮಿಗೆ ಬರಬೇಕಾದರೆ ಬರಿಗೈಯ್ಯಲ್ಲಿ ನಾವು ಬಂದಿದ್ದೇವೆ. ದೇವರು ಎಂತಹ ಕರುಣಾಮಯಿ ಎಂದರೆ ನಾವು ಹುಟ್ಟುವುದಕ್ಕಿಂತ ಮುಂಚೆಯೇ ನಮ್ಮ ಸಲುವಾಗಿ ತಾಯಿಯ ಎದೆ ಹಾಲಿನಲ್ಲಿ ಪೌಷ್ಟಿಕಾಂಶವುಳ್ಳ ಎಲ್ಲ ರೀತಿಯ ಆಹಾರವನ್ನು ಒದಗಿಸಿದ್ದಾನೆ. ಈ ದೇಹ ಲೋಕಕ್ಕೆ ಅರ್ಪಿತವಾಗಬೇಕು ಎಂದು ಹೇಳಿದರು.
ಕುಂಟೋಜಿ ಇತಿಹಾಸದಲ್ಲಿಯೇ ಇದೊಂದು ಹೊಸ ಅಧ್ಯಾಯ ನೂತನ ರಥ ಲೋಕಾರ್ಪಣೆ ಸಮಾರಂಭ. ಕಟ್ಟಿಗೆಯ ರಥ ಲೋಕಾರ್ಪಣೆಯಾದರೆ ಸಾಲುವುದಿಲ್ಲ.ಈ ದೇಹ ಲೋಕಕ್ಕೆ ಅರ್ಪಿತವಾಗಬೇಕು. ಬಸವಣ್ಣನವರು ಇದಕ್ಕೆ ಯಜ್ಞ ಎಂದು ಕರೆದಿದ್ದಾರೆ ಎಂದು ತಿಳಿಸಿದರು.
ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ವಸುದೈವ ಕುಟುಂಬದ ಕಲ್ಪನೆ, ದ್ವೇಷ, ಎಲ್ಲರೂ ತನ್ನವರೆಂಬ ಭಾವ, ನಿಂದನೆಗಳಿಲ್ಲದಿದ್ದವರು ದೇವರಾಗಲು ಸಾಧ್ಯವಿದೆ. ಆದರೆ ಮನುಷ್ಯ ದ್ವೇಷ, ಮತ್ತೊಬ್ಬರನ್ನು ನಿಂದಿಸುವುದು, ಪರಸ್ಪರ ಸ್ನೇಹಭಾವವನ್ನು ಹೊಂದುವುದನ್ನು ಸಹಿಸುತ್ತಿಲ್ಲ. ಆತ ದೇವರಾಗಲು ಅಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇ.ಪಡದಯ್ಯ ಮಠ, ವೀರಯ್ಯ ಶಾಸ್ತ್ರಿಗಳು, ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಮುಖಂಡ ಸಂಗನಗೌಡ ಪಾಟೀಲ, ರುದ್ರಯ್ಯ ಮಠ, ಶಿವಲಿಂಗಪ್ಪ ಗಸ್ತಿಗಾರ, ಶಿಲ್ಪಿ ಮಲ್ಲಪ್ಪ ಬಡಿಗೇರ, ರಾಘವೇಂದ್ರ ಬಡಿಗೇರ, ಮಹೇಶ ಅಂಬಿಗೇರ, ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ, ಪಿಡಿಒ ಪರಶುರಾಮ ನಾಯ್ಕೋಡಿ, ಶಿವಣ್ಣ ಚಿನಿವಾಲರ, ಶರಣು ಹಿರೇಮಠ ಇದ್ದರು. ಸಿಂಧೂ ಹಿರೇಮಠ ಪ್ರಾರ್ಥಿಸಿದರು. ಶರಣು ಹಿರೇಮಠ ನಿರೂಪಿಸಿದರು.ಮನಸ್ವಿ ಬಿರಾದಾರ ವಚನ ಗಾಯನಕ್ಕೆ ನೃತ್ಯ ಮಾಡಿದಳು.