ಮುದ್ದೇಬಿಹಾಳ : ನಮ್ಮಲ್ಲಿರುವ ಆಂತರಿಕ ಭಿನ್ನಭಿಪ್ರಾಯವೇ ದೇಶದ ನಾಗರಿಕರ ಮೇಲಿನ ದಾಳಿಗಳಂತಹ ಘಟನೆಗಳಿಗೆ ವೈರಿ ರಾಷ್ಟ್ರಗಳು ಕೈ ಹಾಕುತ್ತಿವೆ. ನಾವೆಲ್ಲ ಭಾರತ ಅಖಂಡವಾಗಿ ಉಳಿಯುವ ಸಂಕಲ್ಪವನ್ನು ಮಾಡಬೇಕಾಗಿದೆ. ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಸಮರ್ಥವಾಗಿ ಭಾರತದ ಸೇನಾಶಕ್ತಿ ಪ್ರತ್ಯುತ್ತರ ಕೊಟ್ಟಿದೆ ಎಂದು ಮೆಲಕು ಹಾಕಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಸಿರಿವಂತ ದೇಶವಾಗಿದೆ.ನಮಗೆ ಕಾನೂನು ಚೌಕಟ್ಟಿನಲ್ಲಿ ಸ್ವಾತಂತ್ರ್ಯವಿದೆ. ವಾಕ್ ಸ್ವಾತಂತ್ರ್ಯ ಎಂದರೆ ಯಾರನ್ನೂ ಬೇಕಾದರೂ ಟೀಕೆ ಮಾಡುವುದಲ್ಲ. ಯೂಟ್ಯೂಬ್‌ಗಳನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಿ. ಸಾಮಾಜಿಕ ಜಾಲತಾಣಗಳನ್ನು ಗೆಳೆಯರ ಜೊತೆಗೆ ಅಧ್ಯಯನಕ್ಕೆ , ಸಾಂಸ್ಕೃತಿಕ ಚಟುವಟಿಕೆಗೆ ಬಳಸಿಕೊಳ್ಳಬೇಕೆ ಹೊರತು ಸಮಾಜವನ್ನು ಒಡೆಯುವುದಕ್ಕೆ, ಮತ್ತೊಬ್ಬರನ್ನು ಹೀಯಾಳಿಸುವುದಕ್ಕೆ ಬಳಸಬಾರದ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೀರ್ತಿ ಚಾಲಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಾಂಗ್ರೆಸ್ ಮುಖಂಡ ಎಂ.ಬಿ.ನಾವದಗಿ, ತಾಪಂ ಇಒ ನಿಂಗಪ್ಪ ಮಸಳಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸಿಪಿಐ ಮೊಹ್ಮದ ಫಸಿವುದ್ದೀನ, ಬಿಇಒ ಬಿ.ಎಸ್.ಸಾವಳಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮುಖಂಡ ಪ್ರಭು ಕಡಿ ಪುರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪಥ ಸಂಚಲನದಲ್ಲಿ ಚಿನ್ಮಯ ಜೆಸಿ ಶಾಲೆ ಪ್ರಥಮ, ಅಂಜುಮನ್ ಪ್ರೌಢಶಾಲೆ ದ್ವಿತೀಯ, ಅಭ್ಯುದಯ ಇಂಟರನ್ಯಾಶನಲ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.
ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕೆಬಿಎಂಪಿಎಸ್ ಶಾಲೆ ಪ್ರಥಮ, ಎಂ.ಜಿ.ಎಂ.ಕೆ ಎರಡನೇ ಸ್ಥಾನ ಹಾಗೂ ವಿದ್ಯಾಚೇತನ ಶಾಲೆ ಮೂರನೇ ಸ್ಥಾನ ಪಡೆದುಕೊಂಡಿತು. ಆಪರೇಷನ್ ಸಿಂಧೂರ ಪ್ರದರ್ಶನ ನೀಡಿದ ಎಂ.ಜಿ.ಎಂ.ಕೆ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಜನಮನ್ನಣೆ ದೊರೆಯಿತು.
ಪ್ರಶಸ್ತಿ ಸ್ವೀಕರಿಸಲು ನಿರಾಕರಣೆ:
ವಿದ್ಯಾಚೇತನ ಶಾಲೆಯ ಮುಖ್ಯಗುರುಗಳು ತಮ್ಮ ಶಾಲೆಗೆ ಬಂದಿದ್ದ ಮೂರನೇ ಸ್ಥಾನದ ಪ್ರಶಸ್ತಿ ಸ್ವೀಕರಿಸದೇ ವೇದಿಕೆಯಲ್ಲಿದ್ದ ಶಾಸಕರ ಮುಂದೆ ನಾವು ಪ್ರಶಸ್ತಿ ಸ್ವೀಕರಿಸುವುದಿಲ್ಲ. ರಿಮಿಕ್ಸ್ ಹಾಡುಗಳಿಗೆ ಅವಕಾಶ ಇಲ್ಲ ಎಂದು ಮೊದಲು ಹೇಳಿದವರು ಈಗ ರಿಮಿಕ್ಸ್ ಹಾಡುಗಳಿಗೆ ಅವಕಾಶ ಕೊಟ್ಟಿದ್ದೂ ಅಲ್ಲದೇ ಬಹುಮಾನಕ್ಕೆ ಆದ್ಯತೆ ನೀಡಿದ್ದನ್ನು ಖಂಡಿಸುವುದಾಗಿ ಹೇಳಿ ಪ್ರಶಸ್ತಿ ಸ್ವೀಕರಿಸದೇ ವಾಪಸ್ ತೆರಳಿದ ಘಟನೆ ನಡೆಯಿತು.