ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಬಸ್ ನಿಲ್ದಾಣದಲ್ಲಿ ಆ.1 ರಂದು ಬೆಳಗ್ಗೆ 10 ಕ್ಕೆ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 8-30 ರಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮುದ್ದೇಬಿಹಾಳ ಕನಕದಾಸ ಶಾಲೆಯ ಆವರಣದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಮುದ್ದೇಬಿಹಾಳ ಪ್ರಮುಖ ಬೀದಿಗಳ ಮುಖಾಂತರ ಸಕಲ ಸಾಂಪ್ರದಾಯಿಕ ವಾದ್ಯ ವೈಭವಗಳೊಂದಿಗೆ ಕರೆತಂದು ಕುಂಟೋಜಿ ಗ್ರಾಮದ ಸೊಸೈಟಿಯಿಂದ ಕುಂಬಗಳ ಮೆರವಣಿಗೆಯೊಂದಿಗೆ ಭವ್ಯ ಸ್ವಾಗತ ಕೋರಲಾಗುವುದು.
ಗ್ರಾಮದ ಪರಮಹಂಸ ವಿದ್ಯಾವರೇಣ್ಯ ಆಶ್ರಮದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ತಿಂಥಣಿ ಕನಕಗುರುಪೀಠದ ಸಿದ್ಧರಮಾನಂದಪುರಿ ಮಹಾಸ್ವಾಮಿಗಳು ಹಾಗೂ ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ವಹಿಸುವರು. ಹುಲಜಂತಿ ಮಾಳಿಂಗರಾಯ ಸ್ವಾಮೀಜಿ, ಸರೂರು ಹಾಲುಮತ ಗುರುಪೀಠದ ಶಿವಕುಮಾರ ಸ್ವಾಮೀಜಿ ಜ್ಯೋತಿ ಬೆಳಗಿಸುವರು. ತಾಲೂಕಾ ಕುರುಬ ಸಂಘದ ಅಧ್ಯಕ್ಷ ಎಂ.ಎನ್. ಮದರಿ ಕಾರ್ಯಕ್ರಮ ಉದ್ಘಾಟಿಸುವರು. ಹದಡಿಯ ಮುರುಳೀಧರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು ಎಂದು ರಾಯಣ್ಣ ಯುವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಕುರುಬರ ಹಾಗೂ ಯುವ ಮುಖಂಡ ಬಸವರಾಜ ಹುಲಗಣ್ಣಿ ತಿಳಿಸಿದ್ದಾರೆ.