ಮುದ್ದೇಬಿಹಾಳ : ತಾಲೂಕಿನ ಕುಂಟೋಜಿ (ನಂದಿ) ಬಸವೇಶ್ವರ ಹಾಗೂ ಸಂಗಮೇಶ್ವರ ದೇವಸ್ಥಾನದ ಜಾತ್ರೆ ಶ್ರಾವಣ ಮಾಸದ ಕೊನೆಯ ಸೋಮವಾರದಿಂದ ಐದು ದಿನಗಳವರೆಗೆ ಜರುಗಲಿದ್ದು ದೇವಸ್ಥಾನದ ಪ್ರಥಮ ರಥೋತ್ಸವ ಈ ಬಾರಿ ಜಾತ್ರೆಯಲ್ಲಿ ಜರುಗಲಿದೆ ಎಂದು ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹೇಳಿದರು.
ತಾಲ್ಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಥಮ ರಥವನ್ನು ಕೊಪ್ಪಳದಿಂದ ತರುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕುಂಟೋಜಿ ಗ್ರಾಮದ ಮತ್ತು ಸುತ್ತಮುತ್ತಲಿನ ಊರುಗಳು, ನಗರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬಸವಣ್ಣನ ಭಕ್ತರು ದೇಣಿಗೆ ನೀಡಿ ಕೊಪ್ಪಳದ ಜಕಣಾಚರ‍್ಯ ಮತ್ತು ಅಮೋಘವರ್ಷ ನೃಪತುಂಗ ಪ್ರಶಸ್ತಿ ವಿಜೇತ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಇವರು ತಮ್ಮ ಎಂ. ಜಿ. ರಥಶಿಲ್ಪಿ ಕಲಾ ಕೇಂದ್ರದಲ್ಲಿ ಸಂಪೂರ್ಣ ಉಚಿತವಾಗಿ ನಿರ್ಮಿಸಿರುವ ಸಾಗವಾನಿ ಮರದ ರಥವನ್ನು ಜು.30 ರಂದು ಮುದ್ದೇಬಿಹಾಳ ನಗರದ ಪಿಲೇಕೆಮ್ಮ ದೇವಿ ದೇವಸ್ಥಾನದಿಂದ ಕುಂಟೋಜಿ ಗ್ರಾಮದವರೆಗೆ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತಿಸಲಾಗುವುದು ಎಂದರು.
ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಜು.27 ರಂದು ರಥವನ್ನು ತರಲು ಕುಂಟೋಜಿಯಿಂದ ಭಕ್ತರು ಮತ್ತು ದೇವಸ್ಥಾನ ಕಮೀಟಿಯವರು ಟ್ರ್ಯಾಕ್ಟರ್ ಮುಖಾಂತರ ಕೊಪ್ಪಳಕ್ಕೆ ತೆರಳಿಲಿದ್ದಾರೆ. ಜುಲೈ 29 ರಂದು ಬೆಳಿಗ್ಗೆ ಕೊಪ್ಪಳದಿಂದ ರಥವನ್ನು ತೆಗೆದುಕೊಂಡು ಹೊರಟು ಅಂದೇ ಸಂಜೆ ಮುದ್ದೇಬಿಹಾಳ ನಗರಕ್ಕೆ ಆಗಮಿಸಿ, 30ರಂದು ಪಿಲೇಕೆಮ್ಮ ದೇವಾಸ್ಥಾನದಿಂದ ರಥವನ್ನು ಮತ್ತು ಅದರ ಜೊತೆಗೆ 21 ಕಿಲೋ ತೂಕದ ಬಸವಣ್ಣ ಮತ್ತು ಸಂಗಮೇಶ್ವರನ ಬೆಳ್ಳಿಯ ಮುಖವಾಡಗಳನ್ನು, ನಾಗರ ಹೆಡೆಯನ್ನು, ತೇರು ಎಳೆಯುವ ಹಗ್ಗ, ತೇರಿಗೆ ರುದ್ರಾಕ್ಷಿ ಮಾಲೆ, ಕಳಸ, ಇವುಗಳನ್ನು ಮೆರವಣಿಗೆ ಮೂಲಕ ಕುಂಟೋಜಿಗೆ ತರಲಾಗುವುದು ಎಂದರು.
ದೇವಸ್ಥಾನ ಕಮೀಟಿಯ ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೀಕಾರ, ಸೇರಿದಂತೆ ಕಮೀಟಿ ಸದಸ್ಯರು ಇದ್ದರು.






