ಬೀಳಗಿ: ನಾಗರಾಳ ಗ್ರಾಮದಲ್ಲಿ ದಿಗಂಬರೇಶ್ವರಮಠದ ಸದ್ಭಕ್ತರು ಸರಕಾರದ ಸಹಾಯಧನ ಸ್ವೀಕರಿಸದೇ ಸ್ವಯಂಪ್ರೇರಿತರಾಗಿ 50 ಲಕ್ಷ ರೂಪಾಯಿಗಳ ವಂತಿಗೆ ಸೇರಿಸಿ 60 ದಿನಗಳಲ್ಲಿ ಹಿರಿಯರು ಯುವಕರು ತಾಯಂದಿರು ಕೂಡಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಯಾವುದೇ ಸಂಭಾವನೆ ಪಡಿಯದೇ ಸ್ವಯ ಸೇವಕರಾಗಿ ಭವ್ಯವಾದ ಕಪ್ಪರ ಪಡಿಯಮ್ಮ ತಾಯಿ ಸಮುದಾಯ ಸಭಾ ಭವನವನ್ನು ನಿರ್ಮಿಸಿದ್ದು ಸೆ.22 ರಂದು ಸೋಮವಾರ ಮು.8.00 ಗಂಟೆಗೆ ನಾಡಿನ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದು ನಾಗರಾಳದ ದಿಗಂಬರೇಶ್ವರಮಠ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರು ದಿಗಂಬರೇಶ್ವರಮಠದಲ್ಲಿ ನಡೆದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ ಇಂಗಳೇಶ್ವರ ವಚನ ಶಿಲಾಮಂಟಪ ವಿರಕ್ತಮಠದ ಚನ್ನಬಸವ ಸ್ವಾಮೀಜಿ,ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ,
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಪೂಜ್ಯರು ದಿವ್ಯಸಾನಿದ್ಯವಹಿಸಲಿದ್ದಾರೆ ಎಂದರು.
ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸದಾಕಾಲ ಹೊಸದನ್ನೇ ಪ್ರಯೋಗ ಮಾಡುವ ಈ ಗ್ರಾಮದ ಜನರು ಸಮುದಾಯ ಭವನ ನಿರ್ಮಿಸಿದರಿಂದ ಪ್ರತಿ ವರ್ಷ ನಡೆಯುವ ನವರಾತ್ರಿ ಉತ್ಸವದಂತಹ ಧಾರ್ಮಿಕ ಹಾಗೂ ಸಾಹಿತ್ಯಿಕ , ಸಾಂಸ್ಕೃತಿಕ, ಶೈಕ್ಷಣಿಕವಾದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸುಸಜ್ಜಿತವಾದ ವೇದಿಕೆಯನ್ನು ಒದಗಿಸಿದ್ದು ನಮಗೆ ಸಂತೋಷ ತಂದಿದೆ.
ಸಪ್ಟೆಂಬರ್ 22ರಂದು ಬೆಳಿಗ್ಗೆ 7 ಕ್ಕೆ ಹೋಮ ಹವನ ಪೂಜಾ ಕಾರ್ಯಕ್ರಮ 8 ಗಂಟೆಗೆ ನಾಡದೇವಿ ಮೂರ್ತಿ ಭವ್ಯ ಮೆರವಣಿಗೆ. 501 ಮಹಿಳೆಯರಿಂದ ಕುಂಭಮೇಳ. ನಾವಲಗಿಯ ಪ್ರಸಿದ್ಧ ಸಂಬಳ ವಾದನ ನಾಡಿನ ಪ್ರಸಿದ್ಧ ಕಲಾವಿದರಿಂದ ಭವ್ಯ ಮೆರವಣಿಗೆ. ನಂತರ 11 ಗಂಟೆಗೆ 1001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ನಾಡಿನ ಹರ ಗುರು ಚರಮೂರ್ತಿಗಳ ಅಮೃತ ಹಸ್ತದಿಂದ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ದಿಗಂಬರೇಶ್ವರ ಮಠ ನಾಗರಾಳ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಿಂಗಪ್ಪಯ್ಯ ಗುರುಶೇಷಪ್ಪಯ್ಯ ಮಹಾಸ್ವಾಮಿಗಳು ಸೇರಿದಂತೆ ದಿಗಂಬರೇಶ್ವರ ಮಠದ ಸದ್ಭಕ್ತರು ಭಾಗಿಯಾಗಿದ್ದರು.