ಮುದ್ದೇಬಿಹಾಳ : ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ.12 ರಂದು ನಡೆಸಲು ಊರಿನ ದೈವದವರು ನಿರ್ಣಯ ಕೈಗೊಂಡಿದ್ದಾರೆ.
ಪಟ್ಟಣದ ಕುಂಬಾರ ಓಣಿಯಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಕುರಿತ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು.
ವೇ.ಆಯ್.ಬಿ.ಹಿರೇಮಠ ಮಾತನಾಡಿ, ಆ.12 ರಂದು ದೇವರನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು,9ಕ್ಕೆ ಪಿಲೇಕೆಮ್ಮ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ವೀರಭದ್ರೇಶ್ವರ ಉತ್ಸವ ಮೂರ್ತಿ, ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಪುರವಂತರ ಸೇವೆ ಜರುಗಲಿದೆ. ಉಡಿ ತುಂಬುವ ಕಾರ್ಯಕ್ರಮದ ಬಳಿಕ ಮದ್ಯಾಹ್ನ ಪ್ರಸಾದದ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಾತ್ರೆಗೆ ಈಗಾಗಲೇ ದಾನಿಗಳು ತಮ್ಮ ಸೇವೆಯನ್ನು ನೀಡುವುದಾಗಿ ತಿಳಿಸಿದ್ದು ಭಕ್ತರ ಮನೆಗಳಿಗೆ ಪುರವಂತರು ತೆರಳಿ ಜಾತ್ರೆಗೆ ದೇಣಿಗೆ ಸಂಗ್ರಹದ ಜೊತೆಗೆ ಸಮಾಜದವರಿಗೆ ಆಹ್ವಾನ ನೀಡುವರು ಎಂದು ತಿಳಿಸಿದರು. ಉತ್ಸವ ಮೂರ್ತಿಯನ್ನು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಅವರ ಮನೆಯಿಂದ ಮೆರವಣಿಗೆಯಲ್ಲಿ ಆಗಮಿಸಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಊರಿನ ಹಿರಿಯರಾದ ಎಂ.ಬಿ.ನಾವದಗಿ, ಬಣಜಿಗ ಸಮಾಜದ ಅಧ್ಯಕ್ಷ ಅಶೋಕ ಚಟ್ಟೇರ, ಶಿವಾನಂದ ತಾರನಾಳ, ಅಪ್ಪಣ್ಣ ಸಿದ್ದಾಪೂರ, ಬಾಬು ಬಿರಾದಾರ, ಪ್ರಭುರಾಜ ಕಲ್ಬುರ್ಗಿ, ಎಸ್.ಬಿ.ಕನ್ನೂರ, ದಾನಪ್ಪ ನಾಗಠಾಣ, ಶಿವಾನಂದ ಹಿರೇಮಠ, ಉದಯ ರಾಯಚೂರ, ಅಶೋಕ ನಾಡಗೌಡ, ಸೋಮಶೇಖರ ಅಣೆಪ್ಪನವರ, ಮಹಾಂತೇಶ ಪ್ಯಾಟಿಗೌಡರ, ಚಂದ್ರಕಾಂತ ಹೆಬ್ಬಾಳ, ರವಿ ಅಮರಣ್ಣವರ, ಶಶಿ ಮುತ್ತಗಿ, ಶಾಹೀಲ್ ನಾಗಠಾಣ, ಮಹಾಂತಯ್ಯ ಹಿರೇಮಠ ಮೊದಲಾದವರು ಇದ್ದರು.