ಮುದ್ದೇಬಿಹಾಳ : ಆಸ್ತಿ ನೋಡಿಕೊಂಡು ನಾವು ಈ ಮಠಕ್ಕೆ ಬಂದಿಲ್ಲ. ಭಕ್ತರ ಭಕ್ತಿಯೇ ಶ್ರೀಮಠಕ್ಕೆ ಆಸ್ತಿ. ಹುನಗುಂದದಲ್ಲಿರುವ ಗಚ್ಚಿನಮಠಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರನ್ನು ಕರೆಯುತ್ತೇವೆ. ಆ ಸಂಪ್ರದಾಯ ಮುದ್ದೇಬಿಹಾಳದ ಮಠದಲ್ಲೂ ಮುಂದುವರೆಸುತ್ತೇವೆ. ಮಠಕ್ಕೆ ಬರುವವರು ರಾಜಕಾರಣ ಹೊರಗಿಟ್ಟು ಸಾಮಾನ್ಯ ಭಕ್ತರಂತೆ ಬರಬೇಕು ಎಂದು ಮುದ್ದೇಬಿಹಾಳ ಹೊಸಮಠದ ನೂತನ ಸ್ವಾಮೀಜಿ ಅಮರೇಶ್ವರ ದೇವರು ಹೇಳಿದರು.
ಮುದ್ದೇಬಿಹಾಳ ಭಕ್ತರ ಆಹ್ವಾನದ ಮೇರೆಗೆ ಪಟ್ಟಣದ ಕಿಲ್ಲಾದಲ್ಲಿರುವ ಹೊಸಮಠಕ್ಕೆ ಭಾನುವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ವೀರಶೈವ ಲಿಂಗಾಯತ ಸಮಾಜದಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಂಸ್ಕಾರ ಕೊಡಬೇಕು ಎಂದರೆ ಗುರು ಶಿಷ್ಯರ ಪರಂಪರೆ ಬಹುಮುಖ್ಯವಾದದ್ದು. ಶಿಷ್ಯ ನೀರು, ಗುರುಗಳು ಬೆಂಕಿ ಆಗಿರಬೇಕು, ಇಲ್ಲವೇ ಶಿಷ್ಯಂದಿರು ಬೆಂಕಿ ಗುರುಗಳು ನೀರಿನಂತಿರಬೇಕು. ಭಕ್ತರು ಇದ್ದ ಹಾಗೆ ನಾನು ಇರುತ್ತೇನೆ. ಯಾವುದೇ ವ್ಯಕ್ತಿಗಳು ಬಂದರೂ ಮಠಕ್ಕೆ ಅವರು ಭಕ್ತರಾಗಿ ಬಂದು ಭಕ್ತರಾಗಿ ಹೋಗಬೇಕು. ಇದು ಯಾವುದೇ ಪಕ್ಷಕ್ಕೆ ಸಿಮೀತವಾದ ಮಠವಲ್ಲ ಎಂದು ಹೇಳಬಯಸುತ್ತೇವೆ. ಅಂತಹ ಭಾವನೆ ಬರುವುದಕ್ಕೆ ನಾವು ಬಿಡುವುದಿಲ್ಲ. ಎಲ್ಲರೂ ತಿರುಗಿ ನೋಡುವ ಮಠವನ್ನಾಗಿ ಹೊಸಮಠವನ್ನು ಮಾಡುತ್ತೇವೆ. ಜೀರ್ಣೋದ್ಧಾರಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಾಹಿತಿ ರುದ್ರೇಶ ಕಿತ್ತೂರ ಮಾತನಾಡಿ, ಮುದ್ದೇಬಿಹಾಳದಲ್ಲಿ ಹಿಂದೆ ಏಳು ಮಠಗಳಿದ್ದವು. ಆದರೆ ಒಬ್ಬರೂ ಸ್ವಾಮೀಜಿಗಳಿರಲಿಲ್ಲ. ಧರ್ಮ ಮಾರ್ಗದರ್ಶಕರ ಅಗತ್ಯತೆ ಇದ್ದು ಆಧ್ಯಾತ್ಮಿಕ ಚಿಂತನೆ ಕೊರತೆಯನ್ನು ತುಂಬುವ ಸ್ವಾಮೀಜಿಯವರನ್ನು ನಾವು ಬರಮಾಡಿಕೊಂಡಿದ್ದೇವೆ. ಮುದ್ದೇಬಿಹಾಳ ಸೌಹಾರ್ದತೆಗೆ ಹೆಸರಾಗಿದ್ದು ಹೊಸಮಠವನ್ನು ಜೀರ್ಣೋದ್ಧಾರಗೊಳಿಸಿ ಅದರ ಇತಿಹಾಸ ಮರಳಿ ಜನತೆಗೆ ಅರಿವು ಮೂಡಿಸಬೇಕು. ಅಳಿವಿನಂಚಿನಲ್ಲಿದ್ದ ಮಠವನ್ನು ಜೀರ್ಣೋದ್ಧಾರಗೊಳಿಸುವ ಸವಾಲು ಸ್ವೀಕರಿಸಿರುವ ಅಮರೇಶ್ವರ ಶ್ರೀಗಳ ಕರ್ತೃತ್ವ ಶಕ್ತಿ ಬಗ್ಗೆ ಅಭಿಮಾನ,ಗೌರವ ಮುದ್ದೇಬಿಹಾಳದ ಭಕ್ತರು ಹೊಂದಿದ್ದೇವೆ ಎಂದರು.
ನಿವೃತ್ತ ಪ್ರೊ.ಎಸ್.ಎಸ್.ಹೂಗಾರ ಮಾತನಾಡಿ, ಹೊಸಮಠದ ಜೀರ್ಣೋದ್ಧಾರಕ್ಕೆ 25 ಸಾವಿರ ರೂ ದೇಣಿಗೆ ನೀಡುವುದಾಗಿ ತಿಳಿಸಿದರು. ಹುನಗುಂದ ತಾಲ್ಲೂಕಿನ ಭಕ್ತರಾದ ಅರುಣ ದುದ್ದಗಿ, ಪ್ರಭು ಮಾಲಗತ್ತಿಮಠ ಮಾತನಾಡಿ, ಹುನಗುಂದದಲ್ಲಿ ಗಚ್ಚಿನಮಠ ಬೃಹದಾಕಾರವಾಗಿ ಬೆಳೆದಿದೆ. ಮುದ್ದೇಬಿಹಾಳದ ಭಕ್ತರ ಅಪೇಕ್ಷೆಯ ಮೇರೆಗೆ ಇಲ್ಲಿನ ಮಠವನ್ನು, ಜನರನ್ನು ಉದ್ಧರಿಸಲು ಶ್ರೀಗಳು ತಮ್ಮ ಜ್ಞಾನದ ದಾಸೋಹ ಕಾರ್ಯ ಕೈಗೊಳ್ಳಲಿದ್ದು ಭಕ್ತರು ಪೂಜ್ಯರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.
ವೀರೇಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಹುನಗುಂದದ ಮಹಾಂತೇಶ ಮಠ, ಮುಖಂಡರಾದ ವೆಂಕನಗೌಡ ಪಾಟೀಲ, ಶಿವಕುಮಾರ ಬಿರಾದಾರ, ಪತ್ರಕರ್ತ ಶಂಕರ ಹೆಬ್ಬಾಳ, ಪ್ರತಿಭಾ ಅಂಗಡಗೇರಿ, ದಾನಯ್ಯಸ್ವಾಮಿ ಹಿರೇಮಠ, ಬಸವರಾಜ ನಂದಿಕೇಶ್ವರಮಠ ಮಾತನಾಡಿದರು.
ಹುನಗುಂದ ಹಾಗೂ ಮುದ್ದೇಬಿಹಾಳದಿಂದ ಆಗಮಿಸಿದ್ದ ನೂರಾರು ಭಕ್ತರು ಇದ್ದರು. ಹೊಸಮಠಕ್ಕೆ ಮೊದಲ ಬಾರಿಗ ಆಗಮಿಸಿದ ಅಮರೇಶ್ವರ ದೇವರನ್ನು ಪುಷ್ಪಾರ್ಚನೆ ಮೂಲಕ ಭಕ್ತರು ಮಠಕ್ಕೆ ಸ್ವಾಗತಿಸಿದರು.