ಮುದ್ದೇಬಿಹಾಳ : ಶರಣರ ಸಂದೇಶಗಳು ಸಾಮಾಜಿಕ ವ್ಯವಸ್ಥೆಯಲ್ಲಿಯ ಅಸಮಾನತೆ,ಹಲವು ಅನಿಷ್ಠ ಪದ್ಧತಿಗಳ ಕುರಿತು ಅಧ್ಯಯನ ನಡೆಸಿ ವಿಶ್ವವ್ಯಾಪಕಗೊಳಿಸುವ ಕಾರ್ಯ ಆಗಬೇಕಿದೆ ಎಂದು ನಾಲತವಾಡದ ನಿವೃತ್ತ ಶಿಕ್ಷಕ ಎ.ಎಸ್.ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ನೇತೃತ್ವದಲ್ಲಿ ಲಿಂ.ಪರಮಾನAದ ಮಸ್ಕಿ ಹಾಗೂ ಭುವನೇಶ ಕಟಗೇರಿ ಸ್ಮರಣಾರ್ಥ ಗುರುವಾರ ಏರ್ಪಡಿಸಿದ್ದ ಶರಣ ಬೆಳಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪದ ಮೂಲಕ ಎಲ್ಲ ಜಾತಿಯ ಶರಣರಿಗೂ ಸಮಾನತೆ ಕಲ್ಪಿಸುವ ಕೆಲಸ ನಡೆದಿತ್ತು.ಅಂತಹ ಸಮಾನತೆಯ ಸಮಾಜವನ್ನು ಇಂದು ಕಟ್ಟುವ ಸಂದಿಗ್ಧಪರಿಸ್ಥಿತಿಯಲ್ಲಿ ನಾವೆಲ್ಲ ಇದ್ದೇವೆ ಎಂದರು.
ವರ್ತಮಾನಕ್ಕೆ ಶರಣರ ವಿಚಾರಧಾರೆಗಳು ವಿಷಯದ ಕುರಿತು ಮಾತನಾಡಿದ ರಾಂಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಹಂಗರಗಿ, ಸಮಾಜವನ್ನು ವಿಘಟಿಸುವ ಶಕ್ತಿಗಳನ್ನು ತಡೆದು ನಿಲ್ಲಿಸುವ ಶಕ್ತಿ ಶರಣರ ವಿಚಾರಧಾರೆಗಳು,ವಚನಗಳಿಗಿದೆ.ವಚನಗಳನ್ನು ಮಕ್ಕಳಿಗೆ ನಿತ್ಯ ಪಠಣ ಮಾಡಿಸುವುದಕ್ಕೆ ತಾಯಂದಿರು ಮುಂದಾಗಲಿ ಎಂದು ಸಲಹೆ ಮಾಡಿದರು.
ಬಸವ ಭಾವ ಪೂಜೆಯನ್ನು ಕಿತ್ತೂರು ಚೆನ್ನಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಕಮತ, ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ,ಕದಳಿ ವೇದಿಕೆ ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ಮುಖಂಡ ಪ್ರಭುಗೌಡ ಪಾಟೀಲ,ಜೆಸಿ ಸದಸ್ಯೆ ದಿವ್ಯಾ ಕಲಬುರ್ಗಿ,ಹಿರಿಯ ಸಾಹಿತಿ ಅಶೋಕ ಮಣಿ, ಬಾಪುಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.



