ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ 2.50 ಲಕ್ಷ ಜನರು ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ಪ್ರತಿ ಗ್ರಾಮಕ್ಕೂ ಕೂಡಾ ತಿಂಗಳಿಗೆ 25 ಲಕ್ಷ ರೂ.ಜಮಾ ಆಗುತ್ತಿವೆ.ಬಡವರ ಜೀವನಕ್ಕೆ ಆದ್ಯತೆ ಸಿಕ್ಕಿದೆ.ಈ ಮತಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದು ಮಾತನಾಡಿದವರಿಗೆ ಕ್ಷೇತ್ರದ ಸ್ವಾಭಿಮಾನಿ,ಜಾನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಇಲ್ಲಿನ ಜನ ಜಾಣರು,ಸ್ವಾಭಿಮಾನದ ಬದುಕು ನಡೆಸುವಂತವರು.ಇಲ್ಲಿರುವ ಸಂಸ್ಕೃತಿಯೇ ಬೇರೆ.ಶರೆ ಹಂಚಿ,ದುಡ್ಡು ಹಂಚಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಭಾವನೆ ಇದ್ದವರಿಗೆ ದುರ್ಗೆ ಸ್ವರೂಪದ ಮಹಿಳೆಯರು,ಮತದಾರರು ರಾಕ್ಷಸನನ್ನು ಸಂಹಾರ ಮಾಡಿದಂತೆ ಮುಂದೆ ಕೂಡಾ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳೀದರು.
ಇಲ್ಲಿ ಎಷ್ಟೇ ಜಾತಿಬೀಜ ಬಿತ್ತುವ ಕೆಲಸ ಮಾಡಿದರೂ ಅದು ನಡೆಯುವುದಿಲ್ಲ.ಸಹೋದರರಂತೆ ನಾವೆಲ್ಲ ಬಾಳಿದ್ದೇವೆ.ಕಾಕಾ ಮಾವಾ ಎಂದು ಜೀವನ ನಡೆಸಿದ್ದೇವೆ.ಒಂದು ರೂಪಾಯಿಯೂ ಹಣ ತರದಿದ್ದರೆ ಇಷ್ಟೊಂದು ಕೆಲಸ ಹೇಗೆ ಆಗುತ್ತಿದ್ದವು ? ಹಿಂದಿನ ಸರಕಾರದಲ್ಲಿ ಆರ್ಥಿಕ ಅಶಿಸ್ತು ಇತ್ತು.ಹಿಂದಿನ ಸರ್ಕಾರದಲ್ಲಿದ್ದವರು ಕೊಳ್ಳೆ ಹೊಡೆದಿದ್ದಾರೆ ಎಂದು ಹೇಳಬೇಕಾಗುತ್ತದೆ.ನರೇಗಾ ಯೋಜನೆಯಲ್ಲಿ ಗಾಂಧೀಜಿ ಹೆಸರು ತಗೆದು ಹಾಕಿದ್ದಾರೆ.ಆದರೆ ಗಾಂಧೀಜಿ ಪ್ರೇಮಿಗಳು ಯಾಕೆ ಮೌನವಾಗಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡುತ್ತಿಲ್ಲ.ಆಲಮಟ್ಟಿ ಜಲಾಶಯವನ್ನು 524 ಮೀಟರ್ಗೆ ಎತ್ತರಿಸಲು ಅಧಿಸೂಚನೆ ಹೊರಡಿಸುತ್ತಿಲ್ಲ.ಇದರಿಂದಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗಳು ನನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ಅಸಹಕಾರವೇ ಕಾರಣ ಎಂದು ಆರೋಪಿಸಿದರು.
ಈ ಯೋಜನೆ ವ್ಯಾಪ್ತಿಯಲ್ಲಿ ಬರುವ ರೈತರು ರೊಚ್ಚಿಗೇಳಬೇಕು.75 ಟಿಎಂಸಿ ನೀರನ್ನು ಹಂಚಿಕೆ ಮಾಡಿದರೆ ಸಾಕಷ್ಟು ಪ್ರಮಾಣದಲ್ಲಿ ನೀರಾವರಿ ಆಗುತ್ತದೆ.ರಾಜಕಾರಣ ಕೇವಲ ಸೇಡಿನ ಮನೋಭಾವದಿಂದ ವಿಷಬೀಜ ಬಿತ್ತಿ ರಾಜಕಾರಣ ಮಾಡುವಂತಹದ್ದಲ್ಲ.ಒAದು ಧರ್ಮದ ಜನಕ್ಕೆ ಬೈಯ್ಯುವ ಮಾಜಿ ಶಾಸಕರಿಗೆ ಸ್ವರ್ಗ ಸಿಗುತ್ತದೆ ಎಂದು ಕೊಂಡಿದ್ದೀರಾ ಎಂದು ಪ್ರಶ್ನಿಸಿದ ನಾಡಗೌಡರು, ನೀತಿವಂತ ರಾಜಕಾರಣ ಮಾಡುವ ಜನರು ಇವತ್ತಿಗೂ ಇರುವುದರಿಂದ ಇಲ್ಲಿ ಬದಲಾವಣೆ ಆಗಿದೆ ಎಂದು ಹೇಳಿದರು.
ಬರುವ ದಿನಗಳಲ್ಲಿ ನಾಗರಬೆಟ್ಟ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡುತ್ತೇವೆ.ಇವರು ಒಂದಾದರೂ ಶಿಕ್ಷಣ ಸಂಸ್ಥೆ ತಂದಿದ್ದಾರಾ ? ನೀರಾವರಿ ಯೋಜನೆ ಕೊಟ್ಟಿದ್ದಾರೆಯೇ ? ,ಆಸ್ಪತ್ರೆಗಳು ದುಸ್ಥಿತಿಯಲ್ಲಿದ್ದವು. ಬಡವರಿಗೆ ಮನೆ ಕೊಡುವುದಾಗಲೀ, ಕೂಲಿ ಕೊಡುವುದಾಗಲೀ ಮಾಡಿಲ್ಲ ಎಂದು ತಿಳಿಸಿದರು.
700ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಕ್ಷೇತ್ರಕ್ಕೆ ತಂದಿದ್ದೇವೆ.ನಮ್ಮ ಪಾಲಿನ ಹಕ್ಕನ್ನು ಪಡೆದಿದ್ದೇವೆ. ಸರ್ಕಾರದ ಮೇಲೆ ಒತ್ತಡದ ಬದಲಾಗಿ ಹೊಂದಾಣಿಕೆಯಿoದ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ. ಹೇಳಿಕೆ ಕೊಡುವ ಬದಲು ಹತ್ತು ಸಲ ಯೋಚನೆ ಮಾಡಬೇಕು.ಶಾಸಕರಾದ ಬಳಿಕ ಜವಾಬ್ದಾರಿ ಬರಬೇಕು.ಭಿನ್ನರಾಗಿದ್ದೇವೆ ಎಂದೇ ಪಕ್ಷದಿಂದಲೇ ನಮ್ಮನ್ನು ಆಯ್ಕೆ ಮಾಡಿರುತ್ತಾರೆ.ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕರಾಗುವವರು ಬಹಳಷ್ಟು ಜನ ಇದ್ದಾರೆ.ಅವರನ್ನು ಮೀರಿಸುವ ಶಕ್ತಿ ನಿಮಗಿಲ್ಲ.ಕಾಂಗ್ರೆಸ್ ಎರಡು ಸಲ ನಿಮಗೆ ಅವಕಾಶ ಕೊಟ್ಟಿದೆ ಎಂದು ಎಂ,ಎಲ್.ಎ ಆಗಿದ್ದೀರಿ.ಇದನ್ನು ಮರೆತಿದ್ದೀರಿ ಎಂದು ನಡಹಳ್ಳಿ ವಿರುದ್ಧ ವಾಗ್ದಾಳಿ ಮಾಡಿದರು.
ಮುದ್ದೇಬಿಹಾಳ ತಾಲ್ಲೂಕಿಗೆ ವಕ್ರದೃಷ್ಟಿ ಬಿತ್ತು.ಆಗ ನಮಗೆ ಯಾರೂ ದೃಷ್ಟಿ ತಗೆಯಲಿಲ್ಲ.ಷಡ್ಯಂತ್ರ ಮಾಡಿದ್ದರು.ಎಲ್ಲರಿಗೂ ದೇವರು ಟೈಮ್ ಕೊಡುತ್ತಾನೆ.ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಇರುತ್ತದೆ.ವಯಕ್ತಿಕ ಟೀಕೆ ಮಾಡುವ ಬದಲಾಗಿ ಅಭಿವೃದ್ಧಿಯತ್ತ ಹೆಚ್ಚು ಆದ್ಯತೆ ನೀಡಬೇಕು.
ಅಭಿವೃದ್ಧಿ ಕೆಲಸ ಪೂಜೆ ಮಾಡುವ ಬದಲಾಗಿ ಕೆಲಸ ಆರಂಭಿಸಿ ಎಂದು ಹೇಳಿರುತ್ತೇನೆ.ಕೆಲವೊಮ್ಮ ಪಕ್ಷದ ಸಭೆ ಇದರಿಂದ ಕೆಲವು ಕೆಲಸಗಳು ವಿಳಂಬವಾಗಿವೆ.ಫೆ.20 ರಿಂದ ಎಲ್ಲ ಕಾಮಗಾರಿಗಳನ್ನು ಪೂಜೆ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಆಮೆಗತಿಯಲ್ಲಿ ಸರ್ಕಾರಿ ಆಸ್ಪತ್ರೆಯ ಕೆಲಸ: ಸರ್ಕಾರಿ ಆಸ್ಪತ್ರೆಯ ಸುಧಾರಣೆ ಕೆಲಸ ಆಮೆಗತಿಯಲ್ಲಿ ನಡೆದಿದ್ದು ಈ ಬಗ್ಗೆ ಸುದ್ದಿಗಾರರು ಶಾಸಕರ ಗಮನ ಸೆಳೆದಾಗ ಮಾತನಾಡಿದ ಶಾಸಕರು, ಆಸ್ಪತ್ರೆ ಸುಧಾರಣೆಗೆ ಡಿಎಚ್ಒ ಅವರನ್ನು ಕರೆಯಿಸಿ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ಕೊಡುತ್ತೇನೆ.ಕೆಲಸ ಮಾಡದೇ ಇದ್ದರೇ ಅವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೆಲಸ ಸಿಗುತ್ತಿವೆ.ಹೋದ ಬಾರಿ ಕೆಲಸ ಯಾರಿಗೆ ಸಿಕ್ಕಿವೆ.ಆಗ 3-4 ಜನ ಇದ್ದವರಿಗೆ ಮಾತ್ರ ಕೆಲಸ ಸಿಗುತ್ತಿದ್ದವು.ಎಲ್ಲರೂ ಎಲ್ಲ ಕೆಲಸಗಳನ್ನು ಮಾಡುವುದಕ್ಕೆ ಆಗುವುದಿಲ್ಲ.ಕೆಲವರಿಗೆ ಜವಾಬ್ದಾರಿ ಹಂಚಿಕೊಟ್ಟಿರುತ್ತೇನೆ. ಪತ್ರಗಳನ್ನು ಕೊಡುವಂತಹದ್ದು ನನ್ನ ಸಂಪರ್ಕದಲ್ಲಿ ಬಂದಾಗ ನಾನೇ ಸಚಿವರಿಗೆ ಶಿಫಾರಸ್ಸು ಮಾಡಿ ಪತ್ರ ಕೊಡುತ್ತೇನೆ.ಆದರೆ ಕೆಲವರು ನಾನು ಗ್ರಾಂಟ್ ತರುತ್ತೇನೆ ಎಂದು ಬಂದು ನಮ್ಮ ಪತ್ರವನ್ನು ಪಕ್ಕದಲ್ಲಿಟ್ಟು ಅನುದಾನ ಹಾಕಿಸಿಕೊಂಡು ಬಂದಿದ್ದೇನೆ ಎಂದು ಹೇಳಿಕೊಂಡು ತಿರುಗಾಡಿದ ಕೆಲವು ಉದಾಹರಣೆಗಳು ಕಂಡು ಬಂದ ಕಾರಣ ನಾವೇ ನೇರವಾಗಿ ಯಾವ ಮಂತ್ರಿಗೆ ಪತ್ರ ಬೇಕೋ ಅವರಿಗೆ ತಿಳಿಸುವ, ಬರೆಯುವ ಕೆಲಸ ಮಾಡುತ್ತೇವೆ. ಅನುದಾನ ತರುವುದು ಮಾವಿನಕಾಯಿ ಕಿತ್ತಿ ತಂದoತಲ್ಲ.ಮುಖ್ಯಮoತ್ರಿಗಳು ಯಾವ ಕ್ಷೇತ್ರದಲ್ಲಿ ಹಿಂದೆ ಉಳಿದಿದೆಯೋ ಎಂಬುದನ್ನು ಸರ್ವೆ ಮಾಡಿಸುತ್ತಿದ್ದಾರೆ.ಎಲ್ಲ ವರದಿ ಪಡೆದುಕೊಂಡಿದ್ದಾರೆ. ಮುದ್ದೇಬಿಹಾಳ, ತಾಳಿಕೋಟಿ ತಾಲ್ಲೂಕು ಹಿಂದುಳಿದಿವೆ ಎಂಬ ಬಗ್ಗೆ ಗೋವಿಂದರಾವ ವರದಿಯಲ್ಲಿ ಉಲ್ಲೇಖವಾಗಿದ್ದು ಅದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ.ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ.ಪಕ್ಷಾತೀತವಾಗಿ ಉತ್ತರ ಕರ್ನಾಟಕ ಭಾಗದ ಶಾಸಕರು ಒಗ್ಗಟ್ಟಾಗಿ ಅಭಿವೃದ್ಧಿಗೆ ಅನುದಾನ ಕೇಳುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಕೆಪಿಸಿಸಿ ಸದಸ್ಯ ಬಾಪುರಾವ ಹಡಗಲಿ, ವಾಯ್.ಎಚ್.ವಿಜಯಕರ್, ಕಾಂಗ್ರಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ತಾಪಂ ಮಾಜಿ ಸದಸ್ಯ ಶ್ರೀಶೈಲ ಮರೋಳ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಡಾ.ವಿಜಯಕುಮಾರ ಗೂಳಿ,ಮುಖಂಡರಾದ ಸದಾಶಿವ ಮಠ ಮೊದಲಾದವರು ಇದ್ದರು.
ಈ ಕ್ಷೇತ್ರದಿಂದ ಇದು ನನ್ನ ಕೊನೆ ಚುನಾವಣೆ:
ಸಿದ್ಧರಾಮಯ್ಯನವರು ಎಲ್ಲಿಯವರೆಗೂ ರಾಜಕಾರಣದಲ್ಲಿರುತ್ತಾರೆಯೋ ಅಲ್ಲಿಯವರೆಗೂ ರಾಜಕಾರಣದಲ್ಲಿ ಇರುತ್ತೇನೆ.ಮೂರು ಬಾರಿ ಹೇಳಿದ್ದರು ಆದರೆ ಅವರು ಹಿಂದೆ ಸರಿದಿದ್ದಾರೆಯೇ ? ಬಾದಾಮಿಗೆ ಬಂದು ನಿಂತಿದ್ದರು.ಇದು ಮುದ್ದೇಬಿಹಾಳ ಮತಕ್ಷೇತ್ರದಿಂದ ನನ್ನ ಕೊನೆ ಚುನಾವಣೆ ಎಂದಿದ್ದೇನೆ ಹೊರತು ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದಿಲ್ಲ.ಜನ ಬಯಸಿದರೆ ರಾಜಕಾರಣದಲ್ಲಿ ಇರುತ್ತೇನೆ.ಮುಂಬರುವ ಚುನಾವಣೆ ಹೊತ್ತಿನಲ್ಲಿ ಕ್ಷೇತ್ರದ ಹೆಸರು ಬದಲಾವಣೆ ಆಗುವ ಸಾಧ್ಯತೆ ಇದೆ.ಆಗ ಹೇಗೆ ಎಲ್ಲಿ ಅನುಕೂಲತೆ ಇರುತ್ತದೆಯೋ ಹಾಗೆ ನಡೆಯುವುದು.ನನಗೆ ಧಾರವಾಡಕ್ಕೆ ಬಂದು ನಿಲ್ಲು ಎಂದರೆ ನಿಲ್ಲುತ್ತೇನೆ.ನಾನು ರಾಜಕಾರಣದಿಂದ ನಿವೃತ್ತಿ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ.ಜನರ ಜೊತೆಗೆ ನಾನು ಅವರ ಸೇವೆಗೆ ಇರುತ್ತೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.







