
ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಆಯ್ಕೆ ಬಯಸಿ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಮದ್ಯಾಹ್ನ 1 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ನಾಮಪತ್ರ ಸಲ್ಲಿಸಿದ್ದ ಶಾಂತಾ ಮದರಿ ಹಾಗೂ ಕವಿತಾ ಶಿರಗುಪ್ಪಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ನಡೆಸಿದರು.ಈ ವೇಳೆ ಕವಿತಾ ಶಿರಗುಪ್ಪಿ ಅವರು ಸಲ್ಲಿಸಿದ್ದ ನಾಮಪತ್ರದ ಜೊತೆಗೆ ಮೀಸಲಾತಿ ಅಡಿ ಸ್ಪರ್ಧೆ ಮಾಡಿದ್ದರಿಂದ ಲಗತ್ತಿಸಬೇಕಾಗಿದ್ದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸದೇ ಇರುವುದರಿಂದ ಹಾಗೂ ಕೆಲವು ಕಡೆಗಳಲ್ಲಿ ಸಹಿ ಮಾಡದೇ ಇದ್ದುದ್ದರಿಂದ ಶಿರಗುಪ್ಪಿ ಅವರ ನಾಮಪತ್ರವನ್ನು ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಕೆ.ಮಾಳಗೊಂಡ ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು ನ.23ರವರೆಗೆ ನಾಮಪತ್ರಗಳ ಹಿಂದಕ್ಕೆ ಪಡೆಯುವುದಕ್ಕೆ ಅವಕಾಶ ಇದೆ.ನ.26ರಂದು ಫಲಿತಾಂಶ ಪ್ರಕಟಿಸಿ ಆಯ್ಕೆಯಾದವರಿಗೆ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.
ಕಣದಲ್ಲಿ ಶಾಂತಾ ಮದರಿ ಒಬ್ಬರೇ ಉಳಿದಿದ್ದು ಅವರ ಆಯ್ಕೆ ಆದಂತಾಗಿದೆ.ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಉಳಿದಿದೆ.
ಚುನಾವಣೆಗೆ ಸಹಾಯಕರಾಗಿ ಆಯ್.ಬಿ.ಹಿರೇಮಠ, ಪಿಡಿಒ ಪಿ.ಎಸ್.ನಾಯ್ಕೋಡಿ ಕಾರ್ಯನಿರ್ವಹಿಸಿದರು.ಪೊಲೀಸ್ ಇಲಾಖೆಯಿಂದ ಎಎಸ್ಐ ಎ.ಬಿ.ಟಕ್ಕಳಕಿ, ಶಾಂತಗೌಡ ಬನ್ನೆಟ್ಟಿ ಭದ್ರತೆ ಒದಗಿಸಿದ್ದರು.
ಹಿನ್ನಡೆ : ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರವನ್ನು ನಿಗದಿತ ಅವಧಿಯೊಳಗಡೆ ನಾಮಪತ್ರದೊಂದಿಗೆ ಲಗತ್ತಿಸಲು ವಿಫಲರಾಗಿದ್ದಕ್ಕೆ ಕವಿತಾ ಶಿರಗುಪ್ಪಿ ಅವರು ಚುನಾವಣಾ ಕಣದಿಂದ ಹಿನ್ನಡೆ ಅನುಭವಿಸಬೇಕಾಯಿತು.
ಹಾಲಿ,ಮಾಜಿ ಶಾಸಕರಿಂದಲೂ ಮಾಹಿತಿ :
ನಾಮಪತ್ರದೊಂದಿಗೆ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಸಮಯದಲ್ಲಿ ಉಂಟಾದ ಗೊಂದಲದ ಬಗ್ಗೆ ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಚುನಾವಣಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
