ಮುದ್ದೇಬಿಹಾಳ : ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವಿರಾಮ ನೀಡುತ್ತ ಸುರಿಯುತ್ತಿರುವ ಮಳೆಯಿಂದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು ರೈತಾಪಿ ವರ್ಗ ವರುಣನಿಗೆ ಸಾಕಪ್ಪ ಸಾಕು ಬಿಡು ಎನ್ನುವಂತಾಗಿದೆ.
ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕಳೆದ ಬುಧವಾರದಿಂದೀಚಿಗೆ ಒಟ್ಟು 17 ಮನೆಗಳಿಗೆ ಭಾಗಶಃ ಹಾನಿ ಆಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ.7 ರಂದು ಒಂದೇ ದಿನ ವಿವಿಧ ಊರುಗಳಲ್ಲಿ ಒಟ್ಟು 8 ಮನೆಗಳು ಕುಸಿದಿವೆ ಎಂದು ತಿಳಿಸಿದ್ದಾರೆ. ತಗ್ಗು ಪ್ರದೇಶವಿರುವ ಪ್ರದೇಶಗಳಲ್ಲಿ ಮಳೆ ನೀರು ನಿಂತು ಜನಜೀವನಕ್ಕೆ ತೊಂದರೆಯಾಗಿದೆ.
ತಹಸೀಲ್ದಾರ್ ಭೇಟಿ: ಭಾರೀ ಮಳೆಯಿಂದ ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಕೀರ್ತಿ ಚಾಲಕ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕುಂಚಗನೂರು, ಕಮಲದಿನ್ನಿ, ತಂಗಡಗಿ ಭಾಗದ ಗ್ರಾಮಗಳಿಗೆ ತೆರಳಿದ್ದ ತಹಸೀಲ್ದಾರ್‌ರು ಪ್ರವಾಹದ ಪರಿಸ್ಥಿತಿ ಎದುರಾದ್ದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಗ್ರಾಮಸ್ಥರೊಂದಿಗೆ ಚರ್ಚಿಸಿದ್ದಾರೆ. ಕಂದಾಯ ನಿರೀಕ್ಷಕ ಡಿ.ಎಸ್.ತಳವಾರ(ಪವನ್) ಇದ್ದರು.