ಮುದ್ದೇಬಿಹಾಳ : ಕೇಂದ್ರ ಸರ್ಕಾರ ವಕ್ಭ್ ಕಾಯ್ದೆಗೆ ತಿದ್ದುಪಡಿ-2025ರ ಅನುಷ್ಠಾನಕ್ಕೆ ನಮ್ಮ ಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತೇವೆ ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಪ್ರತಿನಿಧಿಗಳು ಹೇಳಿದರು.
ಪಟ್ಟಣದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್, ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸ್ಥಳೀಯ ಮುಸ್ಲಿಂ ಸಮಾಜದ ಮಹಿಳೆಯರು ವಕ್ಭ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷೆ ಸುಮಯ್ಯ ಖಾನ್, ಇಸ್ಲಾಂ ಹೊರಗಿನ ಸದಸ್ಯರ ಸೇರ್ಪಡೆಯಿಂದ ಸಂಸ್ಥೆಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಳು ಮಾಡುವುದು ಇದರ ಹಿಂದಿನ ಕುತಂತ್ರ ಅಡಗಿದೆ. ವಕ್ಭ್ ಬೋರ್ಡ್ನಿಂದ ಸರ್ಕಾರದ ಕೈಗೆ ವಕ್ಭ್ ಆಸ್ತಿಗಳನ್ನು ಘೋಷಿಸುವ ಅಧಿಕಾರ ವರ್ಗಾಯಿಸುತ್ತದೆ. 1995ರ ಕಾಯ್ದೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದು ಹೊಸ ತಿದ್ದುಪಡಿ ಕಾಯ್ದೆಯಲ್ಲಿ ನಿಖರವಾದ ಪ್ರಾತಿನಿಧ್ಯ ನೀಡುವುದಿಲ್ಲ ಎಂದು ಹೇಳಿದರು.
ಈ ಕಾಯ್ದೆಯ ಕುರಿತು ಶಾಸಕರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ರದ್ದುಗೊಳಿಸುವಂತೆ ಒತ್ತಾಯಿಸಬೇಕು. ಸಮುದಾಯದ ಸಮಾಲೋಚನೆಯಿಲ್ಲದೆ ಈ ಕಾಯಿದೆಯ ಸ್ಥಳೀಯ ಅನುಷ್ಠಾನ ಮಾಡಬಾರದು. ತಾಲ್ಲೂಕು ಅಧಿಕಾರಿಗಳು ಶಾಂತಿಯುತ ಜಾಗೃತಿ ಕಾರ್ಯಕ್ರಮ ಹಾಗೂ ಕಾನೂನು ಕಾರ್ಯಾಗಾರಗಳಿಗೆ ಸಹಕಾರ ನೀಡಬೇಕು. ಜಿಲ್ಲಾ ವಕ್ಫ್ ಅಧಿಕಾರಿ ನೊಂದಾಯಿಸಲ್ಪಡದೇ ಇರುವ ವಕ್ಫ್ ಆಸ್ತಿಗಳ ಪರಿಶೀಲನೆ ಹಾಗೂ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಭಾರಿ ತಹಸೀಲ್ದಾರ್ ಎ. ಡಿ. ಅಮರವಾದಗಿ ಮನವಿ ಸ್ವೀಕರಿಸಿದರು. ಜಮಾಅತೆ ಇಸ್ಲಾಮಿ ಹಿಂದ ಸಂಚಾಲಕ ನೂರೇನಬಿ ನದಾಫ, ಸದ್ದಾಂಹುಸೇನ ನದಾಫ, ಪ್ರಮುಖರಾದ ಮುಸರತ್ ನದಾಫ, ರಜಿಯಾ ಅಬಾಲೆ, ನಜಮಾ ಘಾಟಿ, ಆಫ್ರಿನ ಮೋಮಿನ, ಸಾನಿಯಾ ಬಾಗಲಕೋಟೆ, ಹಲೀಮಾ ಮಕಾನದಾರ, ಶಗುಪ್ತಾ ದಫೆದಾರ, ಸಬಾ ಶಿರಗುಂಪಿ, ಕುಲ್ಸುಮ್ ಖಾನ್, ಬಿಸ್ಮಿಲ್ಲಾ ನದಾಫ್, ಯಾಸ್ಮಿನ್ ಎಲಿಗಾರ್ ಇದ್ದರು.